ದೇವಸ್ಥಾನ, ಮಾನವನ ಸಂಬಂಧ ಮರ, ಎಲೆಯಂತೆ: ಪೇಜಾವರ ಶ್ರೀ
ಬೆಳ್ತಂಗಡಿ: ನಾವು ದೇವಾಲಯದ ಅಭಿವೃದ್ಧಿ ಮಾಡಿದಷ್ಟೂ ದೇವರು ನಮ್ಮ ಅಭಿವೃದ್ಧಿ ಮಾಡುತ್ತಾನೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ಅವರು ಬುಧವಾರ ರಾತ್ರಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವಸ್ಥಾನ ಹಾಗೂ ನಮ್ಮ ಸಂಬಂಧ ಮರ ಮತ್ತು ಎಲೆಯ ಸಂಬಂಧದಂತೆ ಒಂದಕ್ಕೊಂದು ಪೂರಕವಾಗಿರಬೇಕು. ದೇವಸ್ಥಾನ ಮರ ಇದ್ದಂತೆ. ನಾವು ಅದರ ಎಲೆಗಳಿದ್ದಂತೆ. ಎಲೆ ಮರದ ರಕ್ಷಣೆ ಮಾಡುತ್ತದೆ. ಮರ ಎಲೆಗಳ ರಕ್ಷಣೆ ಮಾಡುತ್ತದೆ. ದೇವಸ್ಥಾನ ಬಿಂಬ. ನಾವು ಪ್ರತಿಬಿಂಬ. ದೇವರ ಭಕ್ತಿಯನ್ನು ನಾವು ಮಾಡಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ ಎಂದರು.
ದೇವಿಯನ್ನು ನಾವು ಭಾರತಮಾತೆಯಲ್ಲೂ ಕಾಣಬಹುದು. ವಂದೇ ಮಾತರಂ ಗೀತೆ ದುರ್ಗಿಯ ಕುರಿತಾಗಿ ಇರುವಂತಾದ್ದು. ವಾತ್ಸಲ್ಯಧಾರೆ, ಕರುಣಾಧಾರೆಯನ್ನು ಸದಾ ಹರಿಸುವವಳು ದುರ್ಗಾ ಮಾತೆ ಎಂದು ಪೇಜಾವರ ಶ್ರೀ ಹೇಳಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಸತ್ಯ ಎಂಬುದು ಸತ್ಯ. ಧರ್ಮ ಎಂಬುದು ಸ್ಥಿರ. ಒಳ್ಳೆಯ ಆಚಾರ ವಿಚಾರಗಳಿಂದ ಬದುಕು ಸುಂದರವಾಗುತ್ತದೆ ಎಂದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಮಡ್ತಿಲ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಜಗನ್ನಾಥ ಸಾಲಿಯಾನ್, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗಿರಿರಾಜ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಇದ್ದರು.
ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ ಪೆಂರ್ಬುಡ ಸ್ವಾಗತಿಸಿದರು. ರವಿರಾಮ ಭಟ್ ನಿರ್ವಹಿಸಿದರು. ಸೂರ್ಯನಾರಾಯಣ ಪುತ್ತೂರಾಯ ವಂದಿಸಿದರು.