ಸುದ್ದಿ ಸಂಕ್ಷೇಪ
ಸಂಸ್ಕೃತ ಭಾರತೀಯಿಂದ 26, 27ರಂದು ರಾಜ್ಯ ಯುವ ಸಮಾವೇಶ
ಮಂಗಳೂರು: ಸಂಸ್ಕೃತ ಭಾರತೀ ವತಿಯಿಂದ ಜ. 26 ಮತ್ತು 27 ರಂದು ಮಣ್ಣಗುಡ್ಡೆ ಸಂಘನಿಕೇತನದಲ್ಲಿ ರಾಜ್ಯಮಟ್ಟದ ಯುವ ಸಮಾವೇಶ ನಡೆಯಲಿದೆ. ಜ. 25 ರಂದು ಸಂಜೆ 6ಕ್ಕೆ ವೇದ ಶ್ಲೋಕಗಳಲ್ಲಿ ಉಲ್ಲೇಖವಾಗಿರುವ ವಿಜ್ಞಾನ ಸಂಬಂಧಿಸಿದ ಮಾಹಿತಿ ಸಂಗ್ರಹದ 'ಸಂಸ್ಕೃತ ಪ್ರದರ್ಶಿನಿ'ಯನ್ನು ಸಾಗರ್ ಕನ್ಸ್ಟ್ರಕ್ಷನ್ಸ್ ಮಾಲೀಕ ಗಿರಿಧರ ಶೆಟ್ಟಿ ಉದ್ಘಾಟಿಸುವರು. ಹರ್ಷ ಕ್ಲಿನಿಕ್ ವೈದ್ಯ ಡಾ.ಪಿ. ವಾಮನ ಶೆಣೈ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಕೃತ ಭಾರತೀಯ ಸಂಘಟನೆ ಕಾರ್ಯದರ್ಶಿ ನಾಗರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜ. 26 ರಂದು ನಡೆಯುವ ಯುವ ಸಮ್ಮೇಳನವನ್ನು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉದ್ಘಾಟಿಸುವರು. ಒಮೇಗಾ ಆಸ್ಪತ್ರೆ ನಿರ್ದೇಶಕ ಡಾ. ಮುಕುಂದ ಕೆ. ಅಧ್ಯಕ್ಷತೆ ವಹಿಸುವರು. ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೈನಾ ಎಸ್ ಶೆಟ್ಟಿ ಪಾಲ್ಗೊಳ್ಳುವರು. ಕರ್ನಾಟಕ ದಕ್ಷಿಣ ಸಂಸ್ಕೃತ ಭಾರತಿ ಅಧ್ಯಕ್ಷ ಡಾ. ಶ್ರೀನಿವಾಸ ವರಖೇಡಿ ದಿಕ್ಸೂಚಿ ಭಾಷಣ ಮಾಡುವರು. ಸಮಾವೇಶದಲ್ಲಿ ಸಂಸ್ಕೃತ ವಿಷಯವನ್ನು ಅಧ್ಯಯನ ನಡೆಸುತ್ತಿರುವ ಸುಮಾರು ಒಂದು ಸಾವಿರ ಯುವಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಜ. 27 ರಂದು ಸಂಜೆ 5.15ಕ್ಕೆ ನಡೆಯುವ ಸಮಾರೋಪದಲ್ಲಿ ದಿಲ್ಲಿ ಸಂಸ್ಕೃತ ಭಾರತಿ ಅಖಿಲ ಭಾರತ ಸಂಘಟನೆ ಮಂತ್ರಿ ದಿನೇಶ್ ಕಾಮತ್ ಭಾಷಣ ಮಾಡುವರು ಎಂದರು. ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಜಿತೇಂದ್ರ ಕೊಟ್ಟಾರಿ, ಖಜಾಂಚಿ ಸತ್ಯನಾರಾಯಣ ಇದ್ದರು.