ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಸ್ತೆ ದುರವಸ್ಥೆ: ಬೃಹತ್ ಬ್ಯಾನರ್ ಹಾಕಿ ನಾಗರಿಕರಿಂದ ಎಚ್ಚರಿಕೆ

Vishwanath S
Updated On : 25 Jan 2014, 12:37 pm

ಮೂಲ್ಕಿ: ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬ್ಯಾನರ್ ಹಾಕುವ ಮೂಲಕ ಎಚ್ಚರಿಕೆಯ ಸಂದೇಶ ನೀಡುವ ಕಾರ್ಯ ಇತ್ತೀಚೆಗೆ ಪಕ್ಷಿಕೆರೆಯಲ್ಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು 'ಬ್ಯಾನರ್ ಪ್ರತಿಭಟನೆ'ಗೆ ನಾಗರಿಕರು ಮುಂದಾಗಿದ್ದಾರೆ.
ಪಕ್ಷಿಕೆರೆಯಿಂದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಪಕ್ಷಿಕೆರೆ ಜಂಕ್ಷನ್‌ನಲ್ಲಿ ಬೃಹತ್ ಬ್ಯಾನರ್ ಹಾಕಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುವ ಕಾರ್ಯ ಸ್ಥಳೀಯರಿಂದ ನಡೆದಿದೆ.
ಬ್ಯಾನರ್‌ನಲ್ಲಿ ಏನಿದೆ: 'ಅತ್ತೂರು, ಕಿಲೆಂಜೂರು, ಕೆಮ್ರಾಲ್, ಹೊಸಕಾಡು, ಕಾಪಿಕಾಡು, ಸುರಗಿರಿ, ಪಕ್ಷಿಕೆರೆ ಪರಿಸರದ ನಾಗರಿಕರ ಆರಾಧ್ಯ ದೇವರಾಗಿರುವ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಪಕ್ಷಿಕೆರೆಯಿಂದ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟು ಹಲವಾರು ವರ್ಷಗಳು ಸಂದಿವೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮೂರು ಬಾರಿ ಮನವಿ ಕೊಟ್ಟರೂ ಶಾಸಕ, ಸಂಸದ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಪಂಚಾಯಿತಿ ಸದಸ್ಯರು ಸ್ಪಂದಿಸುತ್ತಿಲ್ಲ. ಕೂಡಲೆ ಸಮಸ್ಯೆಗೆ ಸ್ಪಂದಿಸದಿದ್ದರೆ ಭಕ್ತರು ಹಾಗೂ ಊರವರ ಸಹಕಾರದೊಂದಿಗೆ ಪಕ್ಷ ಭೇದ ಮರೆತು ಉಗ್ರ ಹೋರಾಟ ನಡೆಸುವುದಲ್ಲದೆ ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು' ಎಂದು ಬರೆಯಲಾಗಿದೆ.
ಎಲ್ಲಿ ನೋಡಿದರಲ್ಲಿ ಹೊಂಡ: ಪಕ್ಷಿಕೆರೆಯಿಂದ ಸುರಗಿರಿ ದೇವಳ ಮೂಲಕ ಹಾದು ಹೋಗುವ ರಸ್ತೆಯು ಕಿಲೆಂಜೂರು, ಬಲವಿನಗುಡ್ಡೆ ಮೂಲಕ ಭಟ್ಟಕೋಡಿ ಬಳಿ ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ಈ ರಸ್ತೆ ದುರಸ್ತಿ ಪಡಿಸಿದರೆ ಕಿನ್ನಿಗೋಳಿಯಿಂದ ಎಸ್.ಕೋಡಿ ಮೂಲಕ ಪಕ್ಷಿಕೆರೆ ಹೋಗುವವರಿಗೆ ಕಿಲೆಂಜೂರು, ಸುರಗಿರಿ ಮೂಲಕ ಹಾದು ಹೋಗುವ ರಸ್ತೆಯು ಹತ್ತಿರವಾಗಲಿದೆ. ಕಳೆದ ಹಲವು ವರ್ಷಗಳಿಂದ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಹೊಂಡಗಳೇ ತುಂಬಿವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿಯಿದೆ.
ಇತ್ತೀಚೆಗೆ ಪಕ್ಷಿಕೆರೆ ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಬ್ಯಾನರ್ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಕೂಡಲೆ ಸ್ಪಂದನೆ ಸಿಕ್ಕಿ ಪಂಚಾಯತ್ ಸೂಕ್ತ ವ್ಯವಸ್ತೆ ಮಾಡಿತ್ತು. ಇದರಿಂದ ಉತ್ತೇಜನಗೊಂಡ ನಾಗರಿಕರು ಸುರಗಿರಿ ರಸ್ತೆಯ ಬಗ್ಗೆ ಈ 'ಬ್ಯಾನರ್ ಪ್ರತಿಭಟನೆ'ಗೆ ನಾಂದಿ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement