ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್: ಜಿಲ್ಲಾಧಿಕಾರಿ
ಮಂಗಳೂರು: 12.5 ಎಕರೆ ಪ್ರದೇಶದಲ್ಲಿರುವ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಇಬ್ರಾಹಿಂ ವೈದ್ಯಾಧಿಕಾರಿಗೆ ಸೂಚಿಸಿದ್ದಾರೆ.
ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಈಗ ಆಸ್ಪತ್ರೆಯಲ್ಲಿ ಏನೆಲ್ಲ ಸೌಲಭ್ಯ ಇದೆ, ಮುಂದೆ ಯಾವೆಲ್ಲ ಸೌಲಭ್ಯ ಬೇಕು? ಇದರಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳ ಬಗ್ಗೆ ಮಾಸ್ಟರ್ ಪ್ಲ್ಯಾನ್ನಲ್ಲಿ ಪ್ರಸ್ತಾಪಿಸಬೇಕು. ಖಾಸಗಿ ಏಜೆನ್ಸಿಯಿಂದ ಮಾಸ್ಟರ್ ಪ್ಲಾನ್ನ್ನು ತ್ವರಿತವಾಗಿ ಮಾಡಿಸುವಂತೆ ಸೂಚಿಸಿದರು.
ಹಾಲಿ ಟ್ರಾಮಾ ಸೆಂಟರ್ ಸಂಕೀರ್ಣವಾಗಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಇದನ್ನು ತುರ್ತಾಗಿ 1200 ಚದರ ಅಡಿ ವಿಸ್ತೀರ್ಣಕ್ಕೆ ಕಟ್ಟಡ ನಿರ್ಮಿಸಲು ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರು ರು. 12 ಲಕ್ಷ ಅಂದಾಜಿಸಿದ್ದಾರೆ. ಆದರೆ ಅಂದಾಜುವೆಚ್ಚದಲ್ಲಿ ಈ ಮೊತ್ತ ಸಾಲದು, ಕನಿಷ್ಠ ರು. 20 ಲಕ್ಷ ಬೇಕೆಂದಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ವರಿ ತಿಳಿಸಿದರು.
ಆಸ್ಪತ್ರೆಯ ಜೈಲ್ವಾರ್ಡ್ ನಿರ್ಮಾಣ, ಅದರ ಮೇಲ್ಭಾಗದಲ್ಲಿ ಮೆಡಿಸಿನ್ ವಾರ್ಡ್ ಹಾಗೂ ಸರ್ಜರಿ ವಾರ್ಡ್ಗೆ ರು. 152.50 ಲಕ್ಷದ ಪುನರ್ ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಇಎನ್ಟಿ ಮಹಿಳೆ ಮತ್ತು ಪುರುಷರ ವಾರ್ಡ್ ಸ್ಥಳಾಂತರ ಮತ್ತು ಒಪಿಡಿ ವಿಭಾಗ ನವೀಕರಣಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದರು.
ಆಸ್ಪತ್ರೆಗೆ ಟೆಂಡರ್ ಮುಖೇನ ಖರೀದಿಸಲಾದ ವೈದ್ಯಕೀಯ ಉಪಕರಣದಲ್ಲಿ 300 ಎಂಎ ಕ್ಷಕಿರಣ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದನ್ನು ಸುಸ್ಥಿತಿಗೆ ತರುವ ವರೆಗೆ ಟೆಂಡರ್ದಾರರಿಗೆ ಮೊತ್ತ ಪಾವತಿ ಮಾಡದಿರಲು ತೀರ್ಮಾನಿಸಲಾಯಿತು.
3 ತಿಂಗಳು ಗುತ್ತಿಗೆ ಸಾಕು: ಆಸ್ಪತ್ರೆಯ ವಿವಿಧ ಹುದ್ದೆಗಳಿಗೆ ಉಡುಪಿಯ ಸಾಯಿ ಸೆಕ್ಯೂರಿಟೀಸ್ ಟೆಂಡರ್ ಮುಖೇನ ಗುತ್ತಿಗೆ ಪಡೆದಿದೆ. ಈಗ ಅವರ ಟೆಂಡರ್ ಅವಧಿ ಮುಗಿದಿದ್ದು, ಮುಂದಿನ ಟೆಂಡರ್ ಪ್ರಕ್ರಿಯೆ ಮುಗಿಯುವ ವರೆಗೆ ನಿರ್ವಹಿಸುವಂತೆ ಕೋರಲಾಗಿದೆ. ಆದರೆ ಈ ಗುತ್ತಿಗೆದಾರರು ನೌಕರರಿಗೆ ಇಎಸ್ಐ ಮತ್ತು ಪಿಎಫ್ ಮೊತ್ತವನ್ನು ಸರಿಯಾಗಿ ಪಾವತಿಸಿಲ್ಲ. ಸುಮಾರು ರು. 90 ಸಾವಿರದಷ್ಟು ವ್ಯತ್ಯಾಸ ಕಂಡುಬಂದಿದ್ದು, ಮತ್ತೆ ಕಡಿಮೆ ಮೊತ್ತಕ್ಕೆ ಅವರೇ ಟೆಂಡರ್ ಹಾಕಿದ್ದಾರೆ ಎಂದು ಡಾ.ರಾಜೇಶ್ವರಿ ತಿಳಿಸಿದರು. ಅವರ ವಿರುದ್ಧ ಆರೋಪ ಇರುವುದರಿಂದ ಒಂದು ವರ್ಷ ಬದಲು 3 ತಿಂಗಳ ಮಟ್ಟಿಗೆ ಗುತ್ತಿಗೆ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಕೇಸ್ ಹಾಕಿ: ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಆಸ್ಪತ್ರೆಯ 15 ಹಾಸಿಗೆ ಸಾಮರ್ಥ್ಯದ ಎಮರ್ಜೆನ್ಸಿ ವಾರ್ಡ್ ನಿರ್ಮಿಸಲು ರು. 17.45 ಲಕ್ಷ ಅಂದಾಜುಪಟ್ಟಿಯಲ್ಲಿ ರು. 14.22 ಲಕ್ಷ ಮೊತ್ತವನ್ನು ನೀಡಲಾಗಿದೆ. 3 ವರ್ಷ ಕಳೆದರೂ ಇವರು ಕಾಮಗಾರಿ ಪೂರ್ತಿಗೊಳಿಸಿಲ್ಲ ಎಂದು ಡಾ.ರಾಜೇಶ್ವರಿ ಗಮನಕ್ಕೆ ತಂದರು. ಈ ಗುತ್ತಿಗೆದಾರರನ್ನು ರದ್ದುಪಡಿಸಿ ಬೇರೆ ಗುತ್ತಿಗೆ ನೀಡಿ, ಅವರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಕೇಸ್ ದಾಖಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಪ್ರತ್ಯೇಕ ಲೆಕ್ಕಪತ್ರ ಪ್ರಸ್ತಾಪ: ವೆನ್ಲಾಕ್ ಜಿಲ್ಲಾಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಆರೋಗ್ಯ ಸುರಕ್ಷಾ ಸಮಿತಿಯ ಲೆಕ್ಕಪತ್ರವನ್ನು ಪ್ರತ್ಯೇಕಿಸುವ ಬಗ್ಗೆ ಡಾ.ರಾಜೇಶ್ವರಿ ಪ್ರಸ್ತಾಪಿಸಿದರೆ, ಲೇಡಿಗೋಷನ್ ವೈದ್ಯಾಧಿಕಾರಿ ಡಾ.ಶಕುಂತಳಾ ಆಕ್ಷೇಪ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಜಿಲ್ಲಾಸ್ಪತ್ರೆ ಮತ್ತು ಮಕ್ಕಳ ಹಾಗೂ ಸ್ತ್ರೀರೋಗ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ಲಿನಿಕಲ್ ಫೀ ಸಂಗ್ರಹಿಸುತ್ತಿದ್ದು, ಅದೇ ರೀತಿ ಇಲ್ಲಿಯೂ ಮಾಡುವಂತೆ ಡಾ.ರಾಜೇಶ್ವರಿ ಆಗ್ರಹಿಸಿದರು. ಆದರೆ ಚೆಕ್ಗೆ ಜಂಟಿ ಸಹಿ ಇರಬೇಕಾದ್ದರಿಂದ ಇದು ಕಷ್ಟ ಎಂದು ಡಾ.ಶಕುಂತಳಾ ಅಸಮಾಧಾನ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಔಷಧ ಸಾಮಗ್ರಿ ಬರುವ ವರೆಗೆ ಆಸ್ಪತ್ರೆ ಸಮಿತಿಯ ಯೂಸರ್ ನಿಧಿಯಿಂದ ಔಷಧ ಸಾಮಗ್ರಿ ಖರೀದಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.