ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

20ನಿಮಿಷ 20 ಸುದ್ದಿ

Mainashree
Updated On : 26 Jan 2014, 11:00 am

ಬೀದಿಬದಿ ವ್ಯಾಪಾರ ವಿರುದ್ಧ ಕಂದಾಯ ಕಾರ್ಯಾಚರಣೆ
ಮಂಗಳೂರು: ಕೇಂದ್ರ ಮಾರುಕಟ್ಟೆಯಲ್ಲಿ ಬೀದಿಬದಿ ವ್ಯಾಪಾರ ಮಾಡುವವರ ವಿರುದ್ಧ ಪೊಲೀಸ್ ಕಾರ್ಯಾಚರಣೆ ಕೂಡದು, ಬದಲು ನಿಗದಿತ ಸ್ಥಳದಲ್ಲಿ ವ್ಯಾಪಾರ ನಡೆಸುವಂತೆ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿಗಳು ಭಾನುವಾರದಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಇಬ್ರಾಹಿಂ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಭಾನುವಾರದಿಂದಲೇ ಕಂದಾಯ ಅಧಿಕಾರಿಗಳು ಸ್ಥಳದಲ್ಲಿದ್ದು, ಕಾರ್ಯಾಚರಣೆ ನಡೆಸಲಿದ್ದಾರೆ. 15 ದಿನದಲ್ಲಿ ಪರಿಸ್ಥಿತಿ ಸರಿಹೋಗಲಿದೆ. ಮಾರುಕಟ್ಟೆ ವ್ಯಾಪಾರಸ್ಥರು ಬೆಳಗ್ಗೆ 7 ಗಂಟೆಯೊಳಗೆ ವಾಹನಗಳಿಂದ ರಖಂ ಸರಕು ಖಾಲಿ ಮಾಡಿಸಬೇಕು. ಮಾರುಕಟ್ಟೆ ಸ್ವಚ್ಛತೆಗೆ ಗಮನ ನೀಡಬೇಕು, ಶೌಚಾಲಯ ನಿರ್ಮಿಸಬೇಕು ಎಂದರು. ಮಾರುಕಟ್ಟೆ ಸುತ್ತ ಅನಧಿಕೃತ ಪಾರ್ಕಿಂಗ್ ಅವಕಾಶ ನೀಡಬಾರದು ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಕಸ್ತೂರಿ ರಂಗನ್ ವರದಿ
ಅನುಷ್ಠಾನ ಗ್ರಾಮಸಭೆಗಳಲ್ಲಿ ಚರ್ಚೆ
ಕುಂದಾಪುರ: ಪಶ್ಚಿಮಘಟ್ಟ ಸಂರಕ್ಷಣೆಗೆ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲು ರಾಜ್ಯ ಸರ್ಕಾರ ಸಂಪುಟ ಉಪಸಮಿತಿ ರಚಿಸಿದೆ. ಇದಕ್ಕೆ ಪೂರಕವಾಗಿ ಪಶ್ಚಿಮಘಟ್ಟ ಪ್ರದೇಶದ ಗ್ರಾಪಂಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಕಸ್ತೂರಿ ರಂಗನ್ ವರದಿಯನ್ನು ಯಾವ ರೀತಿ ಅನುಷ್ಠಾನಿಸಬೇಕು ಎಂಬುದರ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ಕೋಟೇಶ್ವರ ಸ.ಪ್ರ.ದ. ಕಾಲೇಜು ಮೈದಾನದಲ್ಲಿ 2 ದಿನಗಳ ಕೃಷಿ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಕರಾವಳಿ ಪ್ರದೇಶಕ್ಕೆ ಸಮಸ್ಯೆಯಾಗಿರುವ ಸಿಆರ್‌ಝಡ್ ನಿಯಮವನ್ನು ಕೇರಳ ಹಾಗೂ ಗೋವಾದಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಸಡಿಲಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಧಿಕ ಬೆಲೆಗೆ ಬಿಯರ್ ಮಾರಾಟ: ಪ್ರಕರಣ ದಾಖಲು
ಉಪ್ಪಿನಂಗಡಿ: ಉದನೆಯಲ್ಲಿರುವ ಮದ್ಯದಂಗಡಿಯಲ್ಲಿ ಮಾರಾಟ ಬೆಲೆಗಿಂತ ದುಪ್ಪಟ್ಟು ಅಧಿಕ ಬೆಲೆಗೆ ಬಿಯರ್ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಮತ್ತು ಅದರ ಸಿಬ್ಬಂದಿ ವಿರುದ್ಧ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉದನೆಯ ಡಯಾನ ವೈನ್‌ಶಾಪ್‌ನಲ್ಲಿ ಗ್ರಾಹಕರಿಗೆ 330 ಎಂಎಲ್‌ನ ರು. 47 ಮುಖಬೆಲೆಯ ಕಿಂಗ್ ಫಿಶರ್ ಬಿಯರ್‌ನ್ನು ರು. 70ಕ್ಕೆ ಮಾರಾಟ ಮಾಡುತ್ತಿದ್ದ ಬಗ್ಗೆ ಗ್ರಾಹಕರ ದೂರಿನ ಮೇರೆಗೆ ಅಂಗಡಿ ಮಾಲಕ ಎ.ಸಿ. ಕುರಿಯನ್ ಮತ್ತು ಸಿಬ್ಬಂದಿ ಕುಶಾಲಪ್ಪ ವಿರುದ್ಧ ಅಬಕಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಪ್ರಯಾಣಿಕರೊಬ್ಬರು ಜ.23ರಂದು ರಾತ್ರಿ ಬಿಯರ್ ಖರೀದಿಸಿದಾಗ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರ ತೆಗೆದುಕೊಂಡ ಬಗ್ಗೆ ಗ್ರಾಹಕರು ಆಕ್ಷೇಪಿಸಿದರು ಎನ್ನಲಾಗಿದೆ. ಈ ಬಗ್ಗೆ ಗ್ರಾಹಕ, ಅಬಕಾರಿ ಕಮಿಷನರ್‌ಗೆ ದೂರು ನೀಡಿದ್ದರು. ಶುಕ್ರವಾರ ಅಬಕಾರಿ ಉಪ ನಿರೀಕ್ಷಕ ವಿಶ್ವನಾಥ ಗೌಡ, ಸಿಬ್ಬಂದಿಗಳಾದ ಸುಕುಮಾರ್, ಪ್ರೇಮಾನಂದ ಅಂಗಡಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


ಹಲ್ಲೆ : 14 ಆರೋಪಿಗಳಿಗೆ
ಜಾಮೀನು, ಗ್ರಾಮ ಪ್ರವೇಶಕ್ಕೆ ತಡೆ
ಸುಳ್ಯ: ಜಮೀನು ವಿವಾದಕ್ಕೆ ಸಂಬಂಧಿಸಿ ತಂಡವೊಂದು ಜೀಪ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ, ಮನೆಗೆ ನುಗ್ಗಿ ಮಹಿಳೆಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ 14 ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಸೆಶನ್ ಕೋರ್ಟ್ ಶುಕ್ರವಾರ ಶರತ್ತುಬದ್ಧ ಜಾಮೀನು ನೀಡಿದೆ. ಜನವರಿ 1ರಂದು ಘಟನೆ ನಡೆದಿದ್ದು, ಮರ್ಕಂಜದ ಹವೀನ್ ಕುಮಾರ್(20) ಎಂಬವರು ವಾಸುದೇವ ಗೌಡ, ರೇಣುಕಾ ಪ್ರಸಾದ್, ಮಣಿಪ್ರಸಾದ್, ಭವಾನಿ ಪ್ರಸಾದ್, ವನಜಾಕ್ಷ, ದಯಾನಂದ, ಸತೀಶ, ಆನಂದ ಗೌಡ, ಪವನಕುಮಾರ್, ರೇಖಾನಾತ, ದೀಪಕ್, ಮಹೇಶ್, ಮುರಳೀಧರ, ಅಶೋಕ ಎಂಬವರ ವಿರುದ್ಧ ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಆರೋಪಿಗಳನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎಲ್ಲ 14 ಆರೋಪಿಗಳು ಮುಂದಿನ 30 ದಿನಗಳ ಕಾಲ ಮರ್ಕಂಜ ಗ್ರಾಮಕ್ಕೆ ಕಾಲಿಡಬಾರದು ಎಂದು ಶರತ್ತು ವಿಧಿಸಿ ಜಮೀನು ನೀಡಿದೆ.

ಪ್ರತ್ಯೇಕ ಪ್ರಕರಣ: ಜುಗಾರಿ ಆಟ
ನಡೆಸುತ್ತಿದ್ದ ಮೂವರ ಬಂಧನ
ಕುಂದಾಪುರ: ಪ್ರತ್ಯೇಕ ಪ್ರಕರಣಗಳಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಮೂವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಇಲ್ಲಿಗೆ ಸಮೀಪದ ಕಸಬ ಗ್ರಾಮದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ರು. 1,120 ನಗದು ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ವಡೇರಹೋಬಳಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ ರು. 525 ಹಾಗೂ ಇತರ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಾಳೆ ಮೂಲ್ಕಿ ಪಟ್ಟಣ ಪಂಚಾಯ್ತಿಗೆ ಚುನಾವಣೆ
ಮೂಲ್ಕಿ: ಮೂಲ್ಕಿ ಪಟ್ಟಣ ಪಂಚಾಯಿತಿಯ ಬಪ್ಪನಾಡು, ಕಾರ್ನಾಡು, ಚಿತ್ರಾಪು, ಮಾನಂಪಾಡಿ ಗ್ರಾಮಗಳು ಸೇರಿದಂತೆ 17 ವಾರ್ಡ್‌ಗಳ ಚುನಾವಣೆಯು ಜ.27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದ್ದು, 29ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ 17, ಜೆಡಿಎಸ್ 9, ಎಸ್‌ಡಿಪಿಐ ನಾಲ್ಕು ಹಾಗೂ ನಾಲ್ಕು ಮಂದಿ ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಬಾರಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ಇಬ್ಬರು ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ 9, ಬಿಜೆಪಿಯ 7 ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿತ್ತು.


ಮತಕ್ಕಾಗಿ ಜಿಲ್ಲೆಯ ಶಾಂತಿ ಕದಡುವ ಯತ್ನ: ಶಹೀದ್
ಮಂಗಳೂರು: ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ, ಕೋಮು ಧ್ವೇಷ ಹರಡಲು ಕೆಲವು ಸಂಘಟನೆಗಳು ಶ್ರಮಿಸುತ್ತಿದ್ದು, ಇದು ಮತ ಪಡೆಯುವ ಹುನ್ನಾರ ಎಂದು ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ಆಗ್ರಹಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದ್ದು, ಪೊಲೀಸ್ ಗುಪ್ತಚರ ಇಲಾಖೆ ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದರು. ಜಿಲ್ಲಾ ಪೊಲೀಸ್ ಅಧಿಕಾರಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕು. ಪುತ್ತೂರಿನಲ್ಲಿರುವ ಪುತ್ತೂರು-ಸುಳ್ಯ ಸಬ್‌ಡಿವಿಶನಲ್ ಕಚೇರಿಯನ್ನು ಸುಳ್ಯಕ್ಕೆ ವರ್ಗಾಯಿಸಬೇಕು. ಬಂಟ್ವಾಳದಲ್ಲಿರುವ ಬಂಟ್ವಾಳ-ಬೆಳ್ತಂಗಡಿ ಸಬ್‌ಡಿವಿಶನಲ್ ಕಚೇರಿಯನ್ನು ಬೆಳ್ತಂಗಡಿಗೆ ಸ್ಥಳಾಂತರಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಮೀರ್ ಶಾಫಿ, ನಾಸಿರ್ ಅಹಮ್ಮದ್ ಇದ್ದರು.

ಅಜಕ್ಕಳ ಗಿರೀಶ ಭಟ್ ರಚಿತ 'ಅಗ್ನಿರಸ'ಕ್ಕೆ ಅಕ್ಷರಶ್ರೀ ಪ್ರಶಸ್ತಿ
ಬಂಟ್ವಾಳ: ಆಲದಪದವು ಅಕ್ಷರ ಪ್ರತಿಷ್ಠಾನದಿಂದ ನೀಡಲಾಗುವ ಅಕ್ಷರಶ್ರೀ ತಾಲೂಕು ಪ್ರಶಸ್ತಿಗೆ ಡಾ. ಅಜಕ್ಕಳ ಗಿರೀಶ ಭಟ್ ಅವರ 'ಅಗ್ನಿರಸ' ಕೃತಿ ಆಯ್ಕೆಯಾಗಿದೆ. ಅಕ್ಷರ ಪ್ರತಿಷ್ಠಾನದ ದಶಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಕಟಿತ ಕೃತಿಗಳ ಸ್ಪರ್ಧೆ ನಡೆಸಲಾಗಿದ್ದು ಇದರಲ್ಲಿ ತಾಲೂಕು ಮಟ್ಟದ ಸಾಹಿತ್ಯ ಕೃತಿ ಸ್ಪರ್ಧೆಯಲ್ಲಿ ಗಿರೀಶ ಭಟ್ ಅವರ 2012ರಲ್ಲಿ ಪ್ರಕಟಿತ 'ಅಗ್ನಿರಸ ಚಿಂತನ ಬರಹಗಳ ಸಂಕಲನ' ಪ್ರಥಮ ಸ್ಥಾನ ಪಡೆದು ತಾಲೂಕು ಪ್ರಶಸ್ತಿಗೆ ಆಯ್ಕೆಯಾಗಿದೆ.  ರಘು ಇಡ್ಕಿದು ಅವರ 'ನನ್ನ ನೆರಳಿನ ಚಿತ್ರ' ಸಣ್ಣ ಕತೆಗಳ ಸಂಕಲನ, ಡೊಂಬಯ್ಯ ಇಡ್ಕಿದು ಅವರ 'ಆತ ಮುಸ್ಲಿಮನಲ್ಲ' ಕವನ ಸಂಕಲನ, ಮಹಮ್ಮದ್ ಇಸ್ಮತ್ ಪಜೀರ್ ಅವರ 'ಆರೋಗ್ಯ ಸಿಂಚನ' ವೈದ್ಯಕೀಯ ಲೇಖನ ಸಂಕಲನ 'ಅಕ್ಷರ ಗೌರವ ಪುರಸ್ಕಾರ'ಕ್ಕೆ ಪಾತ್ರವಾಗಿದೆ.  ಫೆಬ್ರವರಿಯಲ್ಲಿ ನಡೆಯುವ ಅಕ್ಷರ ಪ್ರತಿಷ್ಠಾನದ ದಶಮಾನ ಸವಿ ಸಂಭ್ರಮ ಅಕ್ಷರೋತ್ಸವ ೋಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಶೋಕ ಹಲಾಯಿ ತಿಳಿಸಿದ್ದಾರೆ.

ವಾಹನ ಚಾಲಕರಿಗೆ ಅಪಘಾತ ಪರಿಹಾರ ಯೋಜನೆ
ಮಂಗಳೂರು: ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ ಸೇರಿದಂತೆ ಖಾಸಗಿ ವಾಣಿಜ್ಯ ವಾಹನಗಳಲ್ಲಿ ದುಡಿಯುತ್ತಿರುವ ಚಾಲಕರಿಗೆ ಸರ್ಕಾರ ಕರ್ನಾಟಕ ಖಾಸಗಿ ವಾಣಿಜ್ಯ ಚಾಲಕರ ಅಪಘಾತ ಪರಿಹಾರ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಉಚಿತವಾಗಿದ್ದು, ಸರ್ಕಾರವೇ ಪ್ರೀಮಿಯಂ ಮೊತ್ತ ಪಾವತಿಸಲಿದೆ. ಅಪಘಾತಗಳಲ್ಲಿ ಚಾಲಕರಿಗೆ ಪ್ರಾಣಾಪಾಯ, ಶಾಶ್ವತ, ತಾತ್ಕಾಲಿಕ ದುರ್ಬಲತೆ, ಗಾಯಗಳಾದರೆ ಗರಿಷ್ಠ ರು. 2 ಲಕ್ಷ ವಿಮಾ ಮೊತ್ತ ದೊರಯಲಿದೆ. ಚಾಲಕರು ಕರ್ತವ್ಯದಲ್ಲಿ ಇಲ್ಲದಿರುವಾಗಲೂ ಅಪಘಾತಕ್ಕೀಡಾದರೆ ಯೋಜನೆ ಸೌಲಭ್ಯ ಲಭ್ಯವಾಗಲಿದೆ. ಯೋಜನೆಯ ನೋಂದಾಯಿತ ಚಾಲಕರು ಮರಣ ಹೊಂದಿದರೆ ಕುಟುಂಬಕ್ಕ ವಿಮಾ ಸೌಲಭ್ಯ ನೀಡಬಹುದು. ಮಾಹಿತಿಗೆ ಕಂಕನಾಡಿ ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಎಂಡೋ ಸಂತ್ರಸ್ತರಿಗೆ 3ನೇ ಹಂತದ ವಿಶೇಷ ಚಿಕಿತ್ಸೆಗೆ ಒಪ್ಪಂದ
ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗೆ 3ನೇ ಹಂತದ ವಿಶೇಷ ಚಿಕಿತ್ಸೆಗೆ (ತರ್ಶರಿ)ಜಿಲ್ಲೆಯ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಚಿಕಿತ್ಸೆ ಬೇಕಾದವರನ್ನು ಉಚಿತವಾಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಚಿತ ಚಿಕಿತ್ಸೆ ಕೊಡಿಸಿ ನಂತರ ವಾಪಾಸ್ ಬಿಟ್ಟು ಬರಲಾಗುವುದು ಎಂದರು.  ಕೊಕ್ಕಡ ಹಾಗೂ ಆಲಂಕಾರಿನ ಎಂಡೋ ಸಂತ್ರಸ್ತರ ಕೇಂದ್ರಕ್ಕೆ ತಲಾ ರು. 50 ಲಕ್ಷ ನಿರ್ವಹಣಾ ವೆಚ್ಚ ನೀಡಲಿದ್ದು, ಇಲ್ಲಿ ಫಿಸಿಯೋಥೆರಫಿ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲಾಗುವುದು ನಂತರ ಇನ್ನೂ 6 ಕಡೆಗಳಲ್ಲಿ ಇಂಥದ್ದೇ ಕೇಂದ್ರ ತೆರೆಯಲಾಗುವುದು. 2ನೇ ಸಮೀಕ್ಷೆಯಲ್ಲಿ ಹೆಸರು ಬಿಟ್ಟುಹೊದರೆ ಸಂತ್ರಸ್ತರಿಗೆ ಇನ್ನೂ ಹೆಸರು ಸೇರ್ಪಡೆಗೆ ಅವಕಾಶವಿದೆ ಎಂದರು.  ಈ ಪ್ರದೇಶದ ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್‌ಗೆ ಅವಕಾಶ ಕಲ್ಪಿಸಲು ಕ್ಷೇಮ ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶಾಶ್ವತ ಪುನರ್ವಸತಿ ಕೇಂದ್ರ ಕಾರ್ಯಾಚರಿಸುವ ನಿಟ್ಟಿನಲ್ಲಿ ಎನ್‌ಜಿಒ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ವಿದ್ಯುತ್ ಪರಿವರ್ತಕ ಅಳವಡಿಕೆಗಾಗಿ ಮೌನ ಪ್ರತಿಭಟನೆ
ಸುಳ್ಯ: ಪೆರುವಾಜೆ ಗ್ರಾಮದ ಬೊಟ್ಟಾತ್ತಾರು ಎಂಬಲ್ಲಿ ಪರಿಶಿಷ್ಟ ಜಾತಿಯ 20 ಕುಟುಂಬಸ್ಥರ ಮನೆಗೆ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ಮಂಜೂರಾದ ವಿದ್ಯುತ್ ಪರಿವರ್ತಕವನ್ನು ಸುಳ್ಯದ ಮೆಸ್ಕಾಂ ಅಧಿಕಾರಿಗಳು ಖಾಸಗಿ ವ್ಯಕ್ತಿಯೊಬ್ಬರ ಪ್ರಭಾವದಿಂದ ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿ ಬೆಳ್ಳಾರೆ ಮೆಸ್ಕಾಂ ಕಚೇರಿ ಎದುರು ಕಾಲನಿ ನಿವಾಸಿಗಳು ಮೌನ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸುಳ್ಯ ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರದೀಪ್, ತಾಪಂ ಸದಸ್ಯ ಅನಿಲ್ ರೈ, ಸಚಿನ್‌ರಾಜ್ ಶೆಟ್ಟಿ ಹಾಗೂ ಹುಕ್ರಪ್ಪ ಸಮಾಲೋಚನೆ ನಡೆಸಿ ಪರಿವರ್ತಕ ಅಳವಡಿಸಲು ಒಪ್ಪಿದರು. ಆದರೆ ಕಾಲನಿ ನಿವಾಸಿಗಳು ತಾವು ಸೂಚಿಸಿದ ಸ್ಥಳದಲ್ಲಿಯೇ ಅಳವಡಿಸಬೇಕೆಂದು ಪಟ್ಟು ಹಿಡಿದರು. ತಹಸೀಲ್ದಾರ್ ಸ್ಥಳ ತನಿಖೆ ನಡೆಸಿದ ಬಳಿಕ  ಜಾಗ ಸೂಚಿಸಿದರೆ ಅಲ್ಲೇ ಅಳವಡಿಸಿ ಕೊಡಲಾಗವುದೆಂದು ಎಂಜಿನಿಯರ್ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ನಿವಾಸಿಗಳು ಪ್ರತಿಭಟನೆ ವಾಪಸ್ ಪಡೆದರು.

ಯುವ ಸಂಸತ್ ಸ್ಪರ್ಧೆ: ರಕ್ಷಿತಾ ಡಿ. ರಾಜ್ಯಕ್ಕೆ ಪ್ರಥಮ
ಉಪ್ಪಿನಂಗಡಿ: ಈ ಬಾರಿಯ ಯುವ ಸಂಸತ್ ಸ್ಪರ್ಧೆಯಲ್ಲಿ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದ ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ  ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿನಿ ರಕ್ಷಿತಾ ಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.  ಕರ್ನಾಟಕ ರಾಜ್ಯ ಸಂಸದೀಯ ಹಾಗೂ ಶಾಸನ ರಚನಾ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ಆಯೋಜಿಸಿತ್ತು. ಈ ಬಾರಿ ಜಿಲ್ಲಾ ಮಟ್ಟದಲ್ಲಿ ವಿದ್ಯಾ ಸಂಸ್ಥೆಯ ರಕ್ಷಿತಾ ಡಿ ಮತ್ತು ಹರ್ಷಿತಾ ಎಂಬಿಬ್ಬರು ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.  ಈ ಪೈಕಿ ರಕ್ಷಿತಾ ಡಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದು, ಈಕೆ ಇಳಂತಿಲ ಗ್ರಾಮದ ಅಣ್ಣಿ ಗೌಡ ಮತ್ತು ಭವಾನಿ ದಂಪತಿ  ಮಗಳು. ಈಕೆಗೆ ಕಾಲೇಜಿನ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ ಮತ್ತು ಅಧ್ಯಾಪಕ ಗುಡ್ಡಪ್ಪ ಬಲ್ಯ, ಸುಮಾ, ವಿನಾಯಕ ಭಟ್, ಸುಬ್ರಹ್ಮಣ್ಯ ಭಟ್ ಮಾರ್ಗದರ್ಶನ ನೀಡಿದ್ದರು.

ರಿಕ್ಷಾ ವಶ ಯತ್ನ: ಎಎಸ್‌ಐ- ಸಾರ್ವಜನಿಕರ ಮಧ್ಯೆ ಚಕಮಕಿ
ಉಪ್ಪಿನಂಗಡಿ: ಅಂಗಡಿಯೊಂದರ ಎದುರು ನಿಂತಿದ್ದ ರಿಕ್ಷಾವನ್ನು ಕಡಬ ಠಾಣೆ ಎಎಸ್‌ಐ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ಅಂಗಡಿ ಮಾಲೀಕರು, ಸಾರ್ವಜನಿಕರು ಹಾಗೂ ಎಎಸ್‌ಐ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಶುಕ್ರವಾರ ಸಂಜೆ ಕಡಬದಲ್ಲಿ ನಡೆದಿದೆ. ಕಲ್ಲುಗುಡ್ಡೆ- ಕಡಬ ಜೀಪ್ ಚಾಲಕರು ಹಾಗೂ ಗೋಳಿಯಡ್ಕ, ಪೇರಡ್ಕ ಅಟೋ ಚಾಲಕರ ಮಧ್ಯೆ ಸರ್ವಿಸ್ ಹಾಗೂ ಪಾರ್ಕಿಂಗ್ ವಿಚಾರದಲ್ಲಿ ಸಮಸ್ಯೆ ಉದ್ಭವಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಡಬದ ಅಂಗಡಿಯೊಂದರ ಎದುರು ನಿಂತಿದ್ದ ಗೋಳಿಯಡ್ಕದ ಸತ್ಯ ಎಂಬವರ ರಿಕ್ಷಾವನ್ನು ವಶಕ್ಕೆ ತೆಗೆದುಕೊಳ್ಳಲು ಕಡಬ ಎಎಸ್‌ಐ ರುಕ್ಮಯ್ಯ ಯತ್ನಿಸಿ, ಆಟೋದಲ್ಲಿ ಕುಳಿತುಕೊಂಡು ಠಾಣೆಗೆ ತೆರಳುವಂತೆ ಸೂಚಿಸಿದರು. ಆದರೆ, ಈ ಸಂದರ್ಭ ಜಮಾಯಿಸಿದ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರು ಪ್ರತಿರೋಧ ಒಡ್ಡಿ ರಿಕ್ಷಾ ಸುತ್ತ ಜಮಾವಣೆಗೊಂಡರು. ಈ ಸಂದರ್ಭ ಎಎಸ್‌ಐ ಹಾಗೂ ಅಂಗಡಿ ಮಾಲೀಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ವಿಷಯ ತಿಳಿದು ಸ್ಥಳಕ್ಕೆ ಬಂದ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸಿ.ಕೆ. ಜೋಸೆಫ್, ಉದ್ಯಮಿ ರವಿರಾಜ ಶೆಟ್ಟಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇಂದು ಸಂಚಾರ ವ್ಯತ್ಯಯ
ಮಂಗಳೂರು: ನೆಹರೂ ಮೈದಾನದಲ್ಲಿ ಜ. 26 ರಂದು ನಡೆಯುವ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ ಎಂದು ನಗರ ಪೋಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ. ಬೆಳಗ್ಗೆ 6.30 ಗಂಟೆಯಿಂದ ಸಂಚಾರದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿದ್ದು, ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದವರೆಗೆ ಹಾಗೂ ವಿರುದ್ಧ ದಿಕ್ಕಿನಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಗಣ್ಯರ ವಾಹನಗಳು, ಇಲಾಖಾ ವಾಹನ ಹೊರತು ಪಡಿಸಿ, ಇತರ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಎ.ಬಿ.ಶೆಟ್ಟಿ ವೃತ್ತದಿಂದ ನೆಹರೂ ಮೈದಾನದ ತನಕ ಯು.ಪಿ. ಮಲ್ಯ ರಸ್ತೆಯಲ್ಲಿ ಮೈದಾನದ ಬದಿ ಎಲ್ಲಾ ತೆರನಾದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಗೇಟ್ ವೇ ಹೊಟೇಲ್ ರಸ್ತೆಯ ಎಡಭಾಗ, ಪಾಂಡೇಶ್ವರ ರಸ್ತೆಯ ಒಂದು ಬದಿ, ಅಂಚೆ ಕಚೇರಿ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಬಹುದು. ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಎಲ್ಲಾ ವಾಹನಗಳನ್ನು ರೊಸಾರಿಯೋ ರಸ್ತೆಯ ಎಡಭಾಗದಲ್ಲಿ ನಿಲುಗಡೆಗೊಳಿಸಬಹುದು. ಎ.ಬಿ.ಶೆಟ್ಟಿ ವೃತ್ತದಿಂದ ಹೋಗುವ ವಾಹನಗಳು ನೆಹರೂ ವೃತ್ತ ರೊಸಾರಿಯೋ ಆಗಿ ಸಂಚರಿಸಬಹುದು .

ಹಲ್ಲೆ : 14 ಆರೋಪಿಗಳಿಗೆ ಜಾಮೀನು, ಗ್ರಾಮ ಪ್ರವೇಶಕ್ಕೆ ತಡೆ
ಸುಳ್ಯ: ಜಮೀನು ವಿವಾದಕ್ಕೆ ಸಂಬಂಧಿಸಿ ತಂಡವೊಂದು ಜೀಪ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ, ಮನೆಗೆ ನುಗ್ಗಿ ಮಹಿಳೆಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ 14 ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಸೆಶನ್ ಕೋರ್ಟ್ ಶುಕ್ರವಾರ ಶರತ್ತುಬದ್ಧ ಜಾಮೀನು ನೀಡಿದೆ. ಜನವರಿ 1ರಂದು ಘಟನೆ ನಡೆದಿದ್ದು, ಮರ್ಕಂಜದ ಹವೀನ್ ಕುಮಾರ್(20) ಎಂಬವರು ವಾಸುದೇವ ಗೌಡ, ರೇಣುಕಾ ಪ್ರಸಾದ್, ಮಣಿಪ್ರಸಾದ್, ಭವಾನಿ ಪ್ರಸಾದ್, ವನಜಾಕ್ಷ, ದಯಾನಂದ, ಸತೀಶ, ಆನಂದ ಗೌಡ, ಪವನಕುಮಾರ್, ರೇಖಾನಾತ, ದೀಪಕ್, ಮಹೇಶ್, ಮುರಳೀಧರ, ಅಶೋಕ ಎಂಬವರ ವಿರುದ್ಧ ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಆರೋಪಿಗಳನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಎಲ್ಲ 14 ಆರೋಪಿಗಳು ಮುಂದಿನ 30 ದಿನಗಳ ಕಾಲ ಮರ್ಕಂಜ ಗ್ರಾಮಕ್ಕೆ ಕಾಲಿಡಬಾರದು ಎಂದು ಶರತ್ತು ವಿಧಿಸಿ ಜಮೀನು ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement