20ನಿಮಿಷ 20 ಸುದ್ದಿ
ಸಚಿವ ಕೆ.ಜೆ. ಜಾರ್ಜ್ ಇಂದು ಜಿಲ್ಲಾ ಪ್ರವಾಸ
ಮಡಿಕೇರಿ: ಗೃಹ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಭಾನುವಾರ ಬೆಳಗ್ಗೆ 9 ಗಂಟೆಗೆ 65 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಬೆಳಗ್ಗೆ 11.15 ಗಂಟೆಗೆ ಮಡಿಕೇರಿಯಿಂದ ಕುಶಾಲನಗರಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿ ಬೆಳಗ್ಗೆ 11.45 ಕ್ಕೆ ಕುಶಾಲನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೂರ್ಗ್‌ನ ವೋಲ್ಕಾರ್ಟ್ ಕಾಫಿ ಸಂಸ್ಥೆಯ ಹೊಸ ಕಾಫಿ ಕ್ಯೂರಿಂಗ್ ವರ್ಕ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಕುಶಲನಗರದಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ.ಎನ್. ಶಿವಶಂಕರ್ ತಿಳಿಸಿದ್ದಾರೆ.
ಜಾನುವಾರುಗಳೇ ಇಲ್ಲದ ಗುಡುಗಳಲೆ ಜಾತ್ರೆ!
ಶನಿವಾರಸಂತೆ: ರಾಜ್ಯದ ವಿವಿಧೆಡೆ ಹಬ್ಬುತ್ತಿರುವ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಭೀತಿಯೇ ಗುಡುಗಳಲೆ ಜಯದೇವ ಜಾನುವಾರು ಜಾತ್ರೆಗೆ ಕಂಟಕವಾಯಿತೆ? ಪ್ರಮುಖವಾಗಿ ಜಾನುವಾರುಗಳೇ ತುಂಬಿ ತುಳುಕಬೇಕಾಗಿದ್ದ ಮೈದಾನಕ್ಕೆ 2 ದಿನ ಕಳೆದರೂ ಯಾವುದೇ ಜಾನುವಾರು ಬಂದಿಲ್ಲ.
ಶನಿವಾರ ಇಲ್ಲಿ ನಡೆಯುವ ವಾರದ ಸಂತೆಯನ್ನು ಜಾತ್ರೆ ಮೈದಾನದಲ್ಲಿ ನಡೆಸಿದ್ದರಿಂದ ಜನಸಂಖ್ಯೆ ಸ್ವಲ್ಪ ಹೆಚ್ಚಿತ್ತು ಎಂಬುದನ್ನು ಬಿಟ್ಟರೆ ತೂಗುಯ್ಯಾಲೆ, ಕೊಲಂಬಸ್, ಬ್ರೇಕ್‌ಡ್ಯಾನ್ಸ್ ಇನ್ನಿತರ ಆಟಗಳು ಜನರನ್ನು ಆಕರ್ಷಿಸಲೇ ಇಲ್ಲ. ಹೊಟೇಲ್‌ಗಳೂ ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ರೈತರ ಹಿಂಜರಿಕೆ: ಅನೇಕ ರೈತರು ತಮ್ಮ ಜಾನುವಾರುಗಳನ್ನು ಜಾತ್ರೆಗೆ ತರಬಹುದೇ ಎಂದು ಜಾತ್ರಾ ಸಮಿತಿಯವರನ್ನು ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಪಶು ವೈದ್ಯಾಧಿಕಾರಿಗಳು ಜಾನುವಾರುಗಳನ್ನು ಇಲ್ಲಿ ಯಾವುದೇ ತೊಂದರೆ ಇಲ್ಲದೆ ಮಾರಾಟ ಮಾಡಬಹುದು ಎಂದು ತಿಳಿಸಿದೆ. ಅದರೂ ರೈತರು ತಮ್ಮ ಜಾನುವಾರುಗಳನ್ನು ತರಲು ಹಿಂದೇಟು ಹಾಕುತ್ತಿರುವುದು ಜಾತ್ರೆಯ ಹಿನ್ನಡೆಗೆ ಕಾರಣ.
ಇದೀಗ ಈ ಜಾತ್ರೆಯ ಅಭಿಮಾನಿಗಳು ತಮ್ಮ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಜಾನುವಾರುಗಳನ್ನು ಈ ಜಾತ್ರೆಯಲ್ಲಿ ಪ್ರದರ್ಶನಕ್ಕೆ ಇಡುವಂತೆ, ತಮ್ಮ ಸ್ನೇಹಿತರಿಗೂ ತಿಳಿಸುವಂತೆ ಮನವಿ ಮಾಡುತ್ತಿದ್ದಾರೆ.
ಒಟ್ಟಾರೆ, ಎಲ್ಲ ರೀತಿಯ ವ್ಯವಸ್ಥೆಗಳನ್ನು ಜಾನುವಾರುಗಳಿಗೆ ಕಲ್ಪಿಸಲು ಜಾತ್ರೆ ಸಮಿತಿ ಮುಂದಾಗಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಂಡು ಜಾನುವಾರು ಜಾತ್ರೆಯ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಸಹಕರಿಸಬೇಕಾಗಿದೆ.
ಕೇವಲ 13 ದಿನ ಮಾತ್ರ ನಡೆಯುವ ಜಾತ್ರೆ ಇದಾಗಿದ್ದು, ಈಗಾಗಲೇ 2 ದಿನ ಮುಗಿದಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತ ಜಾನುವಾರುಗಳನ್ನು ರೈತರು ಮಾರಾಟ ಮಾಡದಿದ್ದರೂ ಪ್ರದರ್ಶನಕ್ಕಾಗಿ ಜಾತ್ರೆಗೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ.
ಬಿಎಸ್‌ಎನ್‌ಎಲ್ ಅಸಮರ್ಪಕ ಕಾರ್ಯವೈಖರಿ ಖಂಡಿಸಿ ರಸ್ತೆತಡೆ
ನಾಪೋಕ್ಲು: ನಾಪೋಕ್ಲು ಸಮೀಪದ ಚೆಯ್ಯಂಡಾಣೆಯಲ್ಲಿ ಬಿಎಸ್‌ಎನ್‌ಎಲ್ ಅಸಮರ್ಪಕ ಕಾರ್ಯವೈಖರಿ ವಿರುದ್ಧ ಗ್ರಾಮಸ್ಥರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯು ಅಸಮರ್ಪಕ ಕಾರ್ಯನಿರ್ವಹಣೆ ವಿರುದ್ಧ ಗ್ರಾಮಸ್ಥರು ನೀಡಿದ ಮನವಿಗೆ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಆಕ್ರೋಶಿತ ಗ್ರಾಮಸ್ಥರು ಚೆಯ್ಯಂಡಾಣೆ ಕೂಡು ರಸ್ತೆಯಲ್ಲಿ ರಸ್ತೆತಡೆ ನಡೆಸಿದರು.
ಈ ಮಾರ್ಗದಲ್ಲಿ ಯಾವುದೇ ವಾಹನ ಸಂಚಾರಕ್ಕೂ ಅವಕಾಶ ನೀಡದೆ ಗ್ರಾಮಸ್ಥರು ರಸ್ತೆ ಮಧ್ಯೆಯೇ ಕುಳಿತು ಬಿಎಸ್‌ಎನ್‌ಎಲ್ ವಿರುದ್ಧ ಕಿಡಿಕಾರಿದರು.
ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಹಿಂದೆ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲಾಗಿತ್ತು. ಈ ಟವರ್ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇಲ್ಲಿನ ಕೊಕೇರಿ ನರಿಯಂದಡ ಹಾಗೂ ಚೇಲಾವರ ವ್ಯಾಪ್ತಿಯ ಗ್ರಾಹಕರು ತೀವ್ರ ಸಮಸ್ಯೆಗೊಳಗಾಗಿದ್ದರು. ಈ ವ್ಯಾಪ್ತಿಯ ಗ್ರಾಮಸ್ಥರಿಗೆ ದೂರವಾಣಿ ಸಂಪರ್ಕ ಇದ್ದರೂ ಅದು ಯಾವುದೇ ಪ್ರಯೋಜನಕ್ಕೆ ಬಾರದಾಗಿತ್ತು. ಗ್ರಾಹಕರ ಸಮಸ್ಯೆಗೆ ಇಲಾಖಾಧಿಕಾರಿಗಳಿಂದ ಯಾವುದೇ ಸ್ಪಂದನೆ ಕೂಡ ದೊರಕಲಿಲ್ಲ.
ಇದರಿಂದ ಆಕ್ರೋಶಗೊಂಡ ದೂರವಾಣಿ ಗ್ರಾಹಕರು ಚೆಯ್ಯಂಡಾಣೆಯ ಕೆ.ಎನ್.ಸಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಬುಧವಾರ ಬಿಎಸ್‌ಎನ್‌ಎಲ್ ಕಚೇರಿಗೆ ಮುತ್ತಿಗೆ ಹಾಕಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು.
ಸಮಸ್ಯೆ ಪರಿಹಾರಕ್ಕೆ ಇಲಾಖೆಗೆ ಮೂರು ದಿನಗಳ ಗಡುವು ನೀಡಿದ್ದರು. ಇಲಾಖೆಯಿಂದ ಸೂಕ್ತ ಸ್ಪಂದನೆ ದೊರಕದ ಕಾರಣ ಶನಿವಾರ ರಸ್ತೆತಡೆ ನಡೆಸಿದರು.
ಬೇಜವಾಬ್ದಾರಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಅವರು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ವಿರಾಜಪೇಟೆಯ ಉಪ ವಿಭಾಗ ಎಂಜಿನಿಯರ್ ರಾಜೇಂದ್ರ ಹೊನ್ನಪ್ಪನವರ್, ಗ್ರಾಮೀಣ ವಲಯ ಎಂಜಿನಿಯರ್ ಅಶೋಕ್ ಸವನೂರು ಸ್ಥಳಕ್ಕೆ ಆಗಮಿಸಿದಾಗ ಗ್ರಾಮಸ್ಥರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾ ವ್ಯವಸ್ಥಾಪಕಿ ರೇಖಾ ಭಟ್ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಹತ್ತು ದಿನದೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಅಹೋರಾತ್ರಿ ಬಂದ್ ನಡೆಸಲಾವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಜಿಪಂ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಜಿಪಂ ಮಾಜಿ ಸದಸ್ಯ ಬೊವ್ವೇರಿಯಂಡ ರಘು ಅಚ್ಚಯ್ಯ, ಕೆಎನ್‌ಸಿ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷ ಚೇನಂಡ ದೀನಾ ಚೆಂಗಪ್ಪ, ಚೇನಂಡ ಗಿರೀಶ್ ಪೂಣಚ್ಚ, ವಿಎಸ್‌ಎಸ್‌ಎನ್ ಅಧ್ಯಕ್ಷ ಪೊನ್ನಚಂಡ ಎಸ್. ಮಾದಪ್ಪ, ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ತೋಟಂಬೈಲ್ ಅನಂತಕುಮಾರ್, ಬಾಚಮಂಡ ತಿಲಕ್, ಚೆಯ್ಯಂಡ ತಿಮ್ಮಯ್ಯ, ಗ್ರಾಪಂ ಸದಸ್ಯ ಚೇನಂಡ ಶಿವಾಜಿ ಸೋಮಯ್ಯ, ಸದಸ್ಯರಾದ ಬಟ್ಟಿಯಂಡ ಗಿರೀಶ್ ಬೋಪಣ್ಣ, ಮಚ್ಚಂಡ ರಾಣಿ ಗಣಪತಿ, ನೇರ್ಪಂಡ ಸುಷಾ ಮೊಣ್ಣಯ್ಯ, ಉಪಾಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ಆರ್‌ಎಂಸಿ ಸದಸ್ಯ ಐತಿಚಂಡ ಭೀಮಯ್ಯ, ಕೊಡವ ಸಮಾಜದ ಕಾರ್ಯದರ್ಶಿ ಮುಂಡ್ಯೋಳಂಡ ಬಿದ್ದಪ್ಪ, ಚೇನಂಡ ಸಂಪತ್, ಕುಕ್ಕುಮನೆ ಸುಬ್ರಹ್ಮಣ್ಯ, ಭಗವತಿ ದೇವಾಲಯದ ಅಧ್ಯಕ್ಷ ಬೊವ್ವೇರಿಯಂಡ ಲವಕುಮಾರ್, ಪೊಕ್ಕಳಂಡ್ರ ಮನೋಜ್ ಇದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.