ಆರ್.ಎನ್. ನಾಯಕ್ ಕೊಲೆ ಪ್ರಕರಣ: ಇನ್ನಿಬ್ಬರ ಸೆರೆ
ಮಂಗಳೂರು: ಅಂಕೋಲ ಆರ್.ಎನ್. ನಾಯಕ್ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 7ಕ್ಕೇರಿದೆ.
ತಮಿಳುನಾಡು ಮೂಲದ ಕಾಸರಗೋಡು ನಿವಾಸಿ ರಬ್ದೀನ್, ಪಾಲಕ್ಕಾಡ್ ಪಾರ್ಲಿ ಇಸ್ಮಾಯಿಲ್ ಬಂಧಿತರು.
ಡಿ.21ರಂದು ನಾಯಕ್ ಕೊಲೆ ಬಳಿಕ ಇವರು ಶಿವಮೊಗ್ಗ, ಮಂಗಳೂರು, ಬೆಂಗಳೂರು, ಪಾಲ್ಘಾಟ್, ತಿರುಪತಿ, ವಾರಣಾಸಿ, ಕೊಟ್ಟಾಯಂ ಮೊದಲಾದೆಡೆ ತಲೆಮರೆಸಿಕೊಳ್ಳಲು ಹೋಗಿದ್ದರು. ಪಶ್ಚಿಮ ವಲಯದಿಂದ ವಿಶೇಷ ತಂಡ ರಚಿಸಿ ಪತ್ತೆ ಕಾರ್ಯ ಮಾಡಿದ್ದೇವೆ ಎಂದು ಪಶ್ಚಿಮವಲಯ ಐಜಿಪಿ ಪ್ರತಾಪ್ ರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಯಾದ ಆಕಾಶ ಅಲಿಯಾಸ್ ಯಾನೆ ವಿವೇಕ್ ಉಪಾಧ್ಯಾಯ ಭದ್ರತೆ ಪೊಲೀಸ್ ಪ್ರತಿರಕ್ಷಣೆ ದಾಳಿಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದ. ವಿವೇಕ್‌ಗೆ ಸುಪಾರಿಯಾಗಿ 2ಲಕ್ಷ ಹಣ ಸಂದಾಯ ಮಾಡಲಾಗಿತ್ತು. ಅಭಿ ಮತ್ತು ಗಣೇಶ್‌ಗೂ ಹಣ ಸಂದಾಯ ಆಗಿತ್ತು. ಜಗದೀಶ್ ಯಾನೆ ಸತೀಶ್ ಕುಮಾರ್ ಪಟೇಲ್ ವಾರಣಾಸಿ ಸ್ಥಳದಲ್ಲಿಯೇ ಬಂಧಿಸಲಾಗಿತ್ತು. ಅಂಬಾಜಿ ಬಂಡ್‌ಗಾರ್ ಯಾನೆ ಅಭಿ, ಲಕ್ಷ್ಮಣ ಭಜಂತ್ರಿ ಯಾನೆ ಗಣೇಶ್‌ನನ್ನು ಎರಡು ವಾರದ ಹಿಂದೆ ಬಂಧಿಸಿದ್ದರು. ಇವರಿಗೆ ಸಹಾಯ ಮಾಡುತ್ತಿದ್ದ ಇನ್ನಿಬ್ಬರು ಇಸ್ಮಾಯಿಲ್ ಮತ್ತು ರಬ್ದೀನ್‌ನನ್ನು ಈಗ ಬಂಧಿಸಲಾಗಿದೆ. ಆರೋಪಿ ಜಗದೀಶ್ ಪಟೇಲ್ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದರು.
ತನಿಖೆ ವೇಳೆ ಭೂಗತ ಪಾತಕಿ ಬನ್ನಂಜೆ ರಾಜ ಮತ್ತು ಸಹಚರರಾದ ಆಚಂಗಿ ಮಹೇಶ್, ಸುಳ್ಯ ಸಂತೋಷ್ ಸಂಚಿನಲ್ಲಿ ಭಾಗಿಯಾಗಿರುವುದು ತಿಳಿದು ಬಂದಿತ್ತು. ಇಬ್ಬರು ಈಗಾಗಲೇ ಅನೇಕ ಪ್ರಕರಣದಲ್ಲಿ ಭಾಗಿಯಾಗಿ ಮೈಸೂರು ಸೆಂಟ್ರಲ್ ಜೈಲ್‌ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕಳೆದ ವರ್ಷ ಮೈಸೂರು ಇವೆರಲ್ಲ ಸಂಚು ರೂಪಿಸಿ ಹತ್ಯೆ ಮಾಡಿದ್ದರು. ಜೈಲ್‌ನಲ್ಲಿದ್ದ ಅಚಂಗಿ ಮಹೇಶ್ ಸುಳ್ಯ ಸಂತೋಷ್‌ನನ್ನು ವಿಚಾರಣೆಗೆ ಪೊಲೀಸ್ ಕಸ್ಟಡಿ ಪಡೆಯಲಾಗಿದೆ.
ಬೆಳಗಾವಿ ಕೋರ್ಟ್ ಆರೋಪಿಗಳಿಗೆ 15 ದಿನಗಳ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿದೆ. ನಾಲ್ಕು ಕಂಟ್ರಿ ಮೇಡ್ ಪಿಸ್ತೂಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೊಲೆಯಾದ ಸ್ಥಳದಲ್ಲಿ ಎರಡು ಪಿಸ್ತೂಲ್ ವಶಪಡಿಸಿದ್ದು, ಉಳಿದ ಎರಡು ಪಿಸ್ತೂಲ್‌ಗಳನ್ನು ಆರೋಪಿಗಳ ಬಂಧನ ಬಳಿಕ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರತಿ ಆರೋಪಿಗಳ ವಿರುದ್ಧ 2ರಿಂದ 3 ದರೋಡೆ, ಡಕಾಯಿತಿ, ಸುಪಾರಿ ಕೊಲೆ ಮಾಡಿದ ಪ್ರಕರಣಗಳಿವೆ. ನಾಯಕ್‌ಗೆ ಬೆದರಿಕೆ ಕರೆ ಬಂದ ಬಳಿಕ ಪೊಲೀಸ್ ರಕ್ಷಣೆ ನೀಡಲಾಗಿತ್ತು.
ಹೆಚ್ಚಿನ ತನಿಖೆ: ಕರಾವಳಿಯಲ್ಲಿ ಭೂಗತ ಕಾರ್ಯಗಳ ಬಗ್ಗೆ ಜನರಲ್ಲಿ ಆತಂಕ ಉಂಟಾಗಿತ್ತು. ಸರ್ಕಾರದ ಗಮಕ್ಕೆ ಬಂದಿತ್ತು, ಸರ್ಕಾರ ಕೂಡಾ ತೀವ್ರವಾಗಿ ಪರಿಗಣಿಸಿತ್ತು. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಂಘಟಿತ ಅಪರಾಧ ತಡೆಗಟ್ಟಲು ಕ್ರಮ ಕೈಗೊಂಡಿದೆ. ಬೇರೆ ಪಾತ್ರಧಾರಿಗಳು ಇದ್ದಾರೋ ಎಂಬ ತನಿಖೆ ನಡೆಸಬೇಕಾಗಿದೆ.
ಮೊದಲ ಪ್ರಕರಣ: 2002ರಲ್ಲಿ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ಸ್ ಕಾಯ್ದೆ -2000 ಜಾರಿಗೆ ತಂದಿತ್ತು.
ಮೊದಲ ಬಾರಿಗೆ ಈ ಕಾಯ್ದೆಯಡಿ ಆರ್.ಎನ್. ನಾಯಕ್ ಕೊಲೆ ಪ್ರಕರಣ ದಾಖಲಿಸುತ್ತಿದ್ದೇವೆ. ಕಾಯ್ದೆಯ ಸೆ.3ರಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ.
ಇಲಾಖೆಗೂ ಸರ್ಕಾರಕ್ಕೂ ಪ್ರಕರಣ ಸವಾಲಾಗಿತ್ತು. ಇದನ್ನು ವ್ಯವಸ್ಥಿತವಾಗಿ ನಿಭಾಯಿಸಿ, ಕಾಯ್ದೆ ಅನುಷ್ಠಾನ ಗೊಳಿಸಲಾಗಿದೆ. ಆರೋಪ ಪಟ್ಟಿಯನ್ನು ದಾಖಲಿಸುವ ಅವಧಿ 90 ದಿನಗಳು.
ಇದನ್ನು ವಿಶೇಷ ಪ್ರಕರಣವಾಗಿ 180 ದಿನಗಳ ಕಾಲ ವಿಸ್ತರಿಸಲು ಅವಕಾಶ ಇದೆ. ಆದರೆ 90 ದಿನಗಳ ಒಳಗೆ ಆರೋಪ ಪಟ್ಟಿ ದಾಖಲಿಸುವ ವಿಶ್ವಾಸ ಇದೆ.
ಹಫ್ತಾಕ್ಕಾಗಿ: ಕೊಲೆ ಮಾಡಿರುವುದು ಹಫ್ತಾ ಹಣಕ್ಕಾಗಿ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. 2012ರಲ್ಲಿ ಹಫ್ತಾ ವಸೂಲಿಗಾಗಿ ಬನ್ನಂಜೆ ರಾಜ ಕರೆ ಮಾಡಿ ಬೆದರಿಸಿದ ಬಗ್ಗೆ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರೆಡ್ ಕಾರ್ನರ್: ಇಂಟರಪೋಲ್ ಮೂಲಕ ರೆಡ್‌ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಆರೋಪಿಯನ್ನು ಬಂಧಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.