ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೆಟ್ರೋ ಪೈಪ್‌ಲೈನ್ ಇಂಧನ ಬಾವಿಗೆ: ತನಿಖೆಗೆ ಡಿಸಿ ಆದೇಶ

Mainashree
Updated On : 26 Jan 2014, 10:59 am

ಮಂಗಳೂರು: ಮರವೂರು ಬಳಿ ಪೆಟ್ರೋಲಿಯಂ ಸಾಗಾಟ ಕೊಳವೆಗಳಿಂದ ಇಂಧನ ಸೋರಿಕೆಯಾಗಿ ಬಾವಿಗಳ ನೀರು ಹಾಳಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದು, ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಗ್ಯಾಸ್‌ಪೈಪ್ ಲೈನ್‌ಗೆ ಭೂಸ್ವಾಧೀನ ಜಮೀನು ದರ ನಿಗದಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಶನಿವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮೀನು ಮಾಲೀಕರ ಸಭೆ ಕರೆದಿದ್ದರು. ಆದರೆ, ಇದು ಜಿಲ್ಲಾಧಿಕಾರಿಗೆ ಗೊತ್ತೇ ಇರಲಿಲ್ಲ. ಅವರು ಪುರಭವನದ ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ವಿಶೇಷ ಭೂಸ್ವಾಧೀನ ಆಧಿಕಾರಿ ಕೃಷ್ಣ ಮೂರ್ತಿ ಅವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. 12 ಗಂಟೆ ಬಳಿಕ ಸಭೆ ಆರಂಭವಾದಾಗ ಸಭೆ ಬಹಿಷ್ಕರಿಸಲು ರಾಜ್ಯ ರೈತ ಸಂಘ, ಹಸಿರು ಸೇನೆ ಮೊದಲೇ ಕರೆ ಕೊಟ್ಟಿತ್ತು. ಸಭೆಗೆ ಆಗಮಿಸಿದ ಸಂತ್ರಸ್ತರ ವೇದಿಕೆ ಸದಸ್ಯರು, ಮಾತುಕತೆ ನಡೆಸದೆ ನೇರವಾಗಿ ಜಮೀನು ದರ ನಿಗದಿ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಎಳು ದಿನ ಗಡುವು: ಸಭೆಗೆ ಆಗಮಿಸಿದ ಬೆರಳೆಣಿಕೆಯ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸಂತ್ರಸ್ತರ ಎಲ್ಲ ಸಮಸ್ಯೆಗಳಿಗೆ ಎಚ್‌ಪಿಸಿಎಲ್ ಲಿಖಿತವಾಗಿ ಉತ್ತರ ನೀಡಿ ಸಂದೇಶ ಪರಿಹರಿಸಬೇಕು. ಏಳು ದಿನದ ಒಳಗಾಗಿ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದರು.
ಭದ್ರತೆ ಕುರಿತ ಸರಿಯಾದ ಮಾಹಿತಿ ನೀಡದ ಬಗ್ಗೆ ಸಂತ್ರಸ್ತರು ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಪೆಟ್ರೋನೆಟ್ ಪೈಪ್‌ಗೆ ಭೂಸ್ವಾಧೀನ ಮಾಡಲಾಗಿದೆ. ಹೆಚ್ಚುವರಿಯಾಗಿ ಎಚ್‌ಪಿಸಿಎಲ್ ಗ್ಯಾಸ್ ಪೈಪ್‌ಲೈನ್‌ಗೆ ಮತ್ತು ಭೂಸ್ವಾಧೀನ ಮಾಡುತ್ತಿದೆ. ಈ ಜಾಗಕ್ಕೆ ಮಾರುಕಟ್ಟೆ ದರದ ಶೇ.10 ಮಾತ್ರ ಜಮೀನು ಮಾಲೀಕನಿಗೆ ನೀಡುತ್ತದೆ.
ಜುಜುಬಿ ಹಣಕ್ಕೆ ಶಾಶ್ವತ ವಶ!: ಭೂ ಸ್ವಾಧೀನ ಗೊಳಿಸಿದ ಬಳಿಕ ಇಡೀ ಜಾಗದ ಸರ್ವೇ ನಂಬರ್ ಆರ್‌ಟಿಸಿಯಲ್ಲಿ ನಮೂದಿಸುತ್ತಾರೆ. ಸರ್ವೇ ನಂಬ್ರದಲ್ಲಿ ಹಲವು ಮಂದಿ ಜಾಗವಿದ್ದು, ಜಾಗ ಮಾರಾಟ ಕಷ್ಟವಾಗುತ್ತದೆ. ಜುಜುಬಿ ಹಣ ನೀಡಿ, ಮಾಲೀಕತ್ವ ನಿಮ್ಮದೇ ಎಂದು ಹೇಳಿ, ಇಲ್ಲಿ ಕೃಷಿ ಮಾಡಲು ಬಿಡುವುದಿಲ್ಲ, ಹಕ್ಕನ್ನು ಅನುಭವಿಸಲು ಬಿಡದೆ ವಂಚಿಸುತ್ತಿದ್ದಾರೆ. ಆರ್‌ಟಿಸಿಯಲ್ಲಿ ಇತರ ಹಕ್ಕುಗಳ ಕಾಯ್ದಿರಿಸಲಾಗಿದೆ ಎಂದು ಕೆಂಪಕ್ಷರದಲ್ಲಿ ಬರೆದಿರುವುದನ್ನು ತೆಗೆಯಬೇಕು ಎಂದು ಸಂತ್ರಸ್ತರಾದ ಪೆರ್ನಂಕಿ ಡಾ.ಕೆ.ಎಸ್. ಬಲ್ಲಾಳ್, ಇತರರು ಆಗ್ರಹಿಸಿದರು. ಇನ್ನು ಮುಂದೆ ಆರ್‌ಟಿಸಿಯಲ್ಲಿ ಬರೆಯುವಾಗ ಈ ಜಾಗದಲ್ಲಿ ಪೈಪ್‌ಲೈನ್ ಹಾದುಹೋಗಿದೆ ಎಂದು ಬರೆಯಬೇಕು. ಗುಡ್ಡೆಯಲ್ಲಿ ಗೇರು ಬೆಳೆಯಲು ಬಿಡುವುದಿಲ್ಲ, ಜಾಗದ ಮೇಲೆ ವಾಹನ ಹೋಗಲೂ ಬಿಡುವುದಿಲ್ಲ ಎಂದು ಸಂತ್ರಸ್ತ ಕೊಲ್ಯ ದಯಾನಂದ್ ಆರೋಪಿಸಿದರು.  ಮಂಗಳೂರಲ್ಲಿ ಜ.30ಕ್ಕೆ, ಜ.29ಕ್ಕೆ ಬೆಳ್ತಂಗಡಿಯಲ್ಲಿ ಇನ್ನೊಂದು ಸುತ್ತಿನ ಸಭೆ ಕರೆಯಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಭಾತ್ಯಾಗ: ಎಚ್‌ಪಿಸಿಎಲ್ ಅಧಿಕಾರಿಗಳು ಸಭೆ ಆರಂಭಿಸಿದಾಗ 30ಕ್ಕೂ ಹೆಚ್ಚು ಮಂದಿ ಜಮೀನು ಮಾಲೀಕರು ಇದ್ದರು. ಜಿಲ್ಲಾಧಿಕಾರಿ ಆಗಮನ ವಿಳಂಬ ಒಂದು ಕಡೆ, ಇನ್ನೊಂದು ಕಡೆ ಒಬ್ಬೊಬ್ಬ ಜಮೀನು ಮಾಲೀಕರ ಹೆಸರು ಬರೆದುಕೊಳ್ಳಲು ಆರಂಭಿಸಿದಾಗ ಸಂತ್ರಸ್ತರು ಸಿಟ್ಟಿಗೆದ್ದರು. ಹೆಸರು ಬರೆದ ಪುಸ್ತಕದ ಹಾಳೆಯನ್ನು ಕಿತ್ತೆಸೆಯುವಂತೆ ಬೆದರಿಸಿದ ಬಳಿಕ ಸಭಾ ತ್ಯಾಗ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement