ಕುಮ್ಕಿ ಜಮೀನು ಮಂಜೂರು: ಸದ್ಯವೇ ಅಂತಿಮ ಅಧಿಸೂಚನೆ
ಮಂಗಳೂರು: ಜಿಲ್ಲೆಯ ರೈತರಿಗೆ ಕುಮ್ಕಿ ಜಮೀನು ಮಂಜೂರು ಮಾಡುವ ಉದ್ದೇಶದಿಂದ ಕರಡು ನಿಯಮವನ್ನು ರೂಪಿಸಲಾಗಿದೆ. ಸದ್ಯದಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಭಾನುವಾರ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಜಿಲ್ಲೆಯಲ್ಲಿ ಅಡಕೆ ಕೊಳೆರೋಗದಿಂದ ಸಂತ್ರಸ್ತ ರೈತರಿಗೆ ರು. 20 ಕೋಟಿ ಪರಿಹಾರ ವಿತರಿಸಲಾಗಿದ್ದು, ಬಾಕಿ ಇರುವ ಪರಿಹಾರ ಮೊತ್ತವನ್ನು ಶೀಘ್ರವೇ ವಿತರಿಸಲಾಗುವುದು. ನೆನೆಗುದಿಗೆ ಬಿದ್ದ ರಂಗ ಮಂದಿರ, ಅಂಬೇಡ್ಕರ್ ಭವನ, ಸರ್ವೀಸ್ ಬಸ್ ನಿಲ್ದಾಣವನ್ನು ಈ ವರ್ಷದಲ್ಲಿ ನಿರ್ಮಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ರು. 1.95 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ವಾರದಲ್ಲೇ ಸೌಲಭ್ಯ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಶಿರಾಡಿಗೆ 90 ಕೋಟಿ: ಸಕಲೇಶಪುರದಿಂದ ಗುಂಡ್ಯವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ಸರ್ಕಾರದಿಂದ ರು. 90 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ ಕಾಮಗಾರಿ ಪ್ರಕ್ರಿಯೆಗೆ ಪ್ರಾರಂಭಿಸಲಾಗಿದೆ. ಕೊಯ್ಲದಲ್ಲಿ ಪಶು ಸಂಗೋಪನ ಕಾಲೇಜು ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಉಳ್ಳಾಲ ಕರಾವಳಿ ತೀರದಲ್ಲಿ ಶಾಶ್ವತ ಕಡಲ್ಕೊರೆತ ನಿರ್ಮಾಣಕ್ಕೆ ಎಡಿಬಿ ಯೋಜನೆಯಲ್ಲಿ ಕಾರ್ಯಪ್ರಾರಂಭವಾಗಿದೆ. ಮಾಣಿಯಿಂದ ಸಂಪಾಜೆವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಈ ವರ್ಷದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕುಳಾಯಿಯಲ್ಲಿ ರು. 151 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಕುರಿತ ಪ್ರಸ್ತಾವನೆಯನ್ನು ಮಂಜೂರಾತಿಗೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
6 ಮಂದಿಗೆ ಸರ್ವೋತ್ತಮ ಪ್ರಶಸ್ತಿ: ಸರ್ಕಾರಿ ಇಲಾಖೆಯಲ್ಲಿ ಗಮನೀಯ ಕಾರ್ಯ ನಿರ್ವಹಿಸಿದ 6 ಮಂದಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುತ್ತೂರು ತಹಸೀಲ್ದಾರ್ ಕುಳ್ಳೇ ಗೌಡ, ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಸುಬ್ಬ ರಾವ್ ಅಗಳಿ, ಐವರ್ನಾಡು ಪಿಡಿಒ ಯು.ಟಿ.ಶೇಖರ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಳದಂಗಡಿಯ ವಾರ್ಡನ್ ಹೇಮಲತಾ, ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಾಲತಿ, ಜಿಲ್ಲಾ ಗ್ರಂಥಾಲಯ ಸಹಾಯಕ ಪಿ.ಕೆ.ಕೃಷ್ಣಗೆ ಪ್ರಶಸ್ತಿ ನೀಡಲಾಯಿತು.
ಕೃಷಿ ಪ್ರಶಸ್ತಿ ಪ್ರದಾನ: ಇದೇ ವೇಳೆ ಜಿಲ್ಲಾ ಮಟ್ಟದ ಕೃಷಿಕ ಸಾಧಕ ಎಲಿಯಾಸ್ ಡಿಸೋಜ, ಪುರುಷೋತ್ತಮ, ಸುಂದರಿ ಹಾಗೂ ಶೀನ ಶೆಟ್ಟಿ, ಸದಾಶಿವ ಶೆಟ್ಟಿ, ಸಂಜೀವಗೆ ತಾಲೂಕು ಮಟ್ಟದ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಇಬ್ರಾಹಿಂ ಮತ್ತಿತರರಿದ್ದರು.