ಆರ್ಟಿಇಗೆ ಯುವ ಕಾಂಗ್ರೆಸ್ನಿಂದ 'ವಿದ್ಯಾ ಸಹಾಯ ಹಸ್ತ'
ಉಡುಪಿ: ಕೇಂದ್ರ ಯುಪಿಎ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯಿದೆಯ ಲಾಭ ರಾಜ್ಯದ ಪ್ರತಿಯೊಂದು ಅರ್ಹ ಕುಟುಂಬಕ್ಕೆ ದೊರೆಯುವಂತೆ ಮಾಡುವುದಕ್ಕೆ ರಾಜ್ಯ ಯುವ ಕಾಂಗ್ರೆಸ್ 'ವಿದ್ಯಾ ಸಹಾಯ ಹಸ್ತ' ಎಂಬ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್.ಎಂ. ಪ್ರತಾಪ್ ಪ್ರಕಟಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012-13ನೇ ಸಾಲಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ವಿಫಲವಾಗಿತ್ತು. ರಾಜ್ಯದ ಖಾಸಗಿ ಶಾಲೆಗಳ ದಬ್ಬಾಳಿಕೆ, ದಲ್ಲಾಳಿಗಳ ಹಾವಳಿ ಇತ್ಯಾದಿ ಕಾರಣದಿಂದ ರಾಜ್ಯದಲ್ಲಿ ಬಡ ಮಕ್ಕಳಿಗಾಗಿಯೇ ಮೀಸಲಿದ್ದ 37 ಸಾವಿರ ಸೀಟ್ಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು. 2013-14ನೇ ಸಾಲಿನಲ್ಲಿ ಈ ಸಮಸ್ಯೆ ಉಂಟಾಗಬಾರದು, ಎಲ್ಲ ಅರ್ಹ ಬಡ ಮಕ್ಕಳಿಗೆ ಕೇಂದ್ರ ಸರ್ಕಾರ ನೀಡಿರುವ ಉಚಿತ ಮತ್ತು ಬಡ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಪಡೆಯುವ ಹಕ್ಕನ್ನು ಒದಗಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ಈ ವಿದ್ಯಾ ಸಹಾಯ ಹಸ್ತ ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ರಾಜ್ಯದ ಪ್ರತಿಯೊಂದು ಜಿಲ್ಲೆ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ಈಗಾಗಲೇ ಲೋಕಸಭೆ ಚುನಾವಣೆಗಾಗಿ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಮೂಲಕ ಪ್ರತಿಯೊಂದು ಅರ್ಹ ಕುಟುಂಬದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ ಲಾಭವನ್ನು ತಲುಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ, ಕಾಪು ಕ್ಷೇತ್ರಾಧ್ಯಕ್ಷ ವಿಶ್ವಾಸ್ ಅಮೀನ್, ಪ್ರಧಾನ ಕಾರ್ಯದರ್ಶಿ ಮೆಲ್ವಿನ್, ಕುಂದಾಪುರ ಕ್ಷೇತ್ರಾಧ್ಯಕ್ಷ ನಟರಾಜ ಹೊಳ್ಳ, ಅಲ್ಪಸಂಖ್ಯಾತ ಘಟಕದ ರಿಯಾಜ್ ಪಳ್ಳಿ, ಮಾಜಿ ಲೋಕಸಭಾ ಕ್ಷೇತ್ರಾಧ್ಯಕ್ಷ ಅಮೃತ್ ಶೆಣೈ ಮುಂತಾದವರಿದ್ದರು.
ಅಭಿಯಾನ ಹೀಗಿದೆ
ಈ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ಅರ್ಜಿಯ ಪ್ರತಿಗಳನ್ನು ಒದಗಿಸುವುದು, ಅರ್ಜಿ ಭರ್ತಿ ಮಾಡುವುದು, ಅಗತ್ಯ ದಾಖಲೆಗಳನ್ನು ಒದಗಿಸುವುದು, ಸಮೀಪದ ಶಾಲೆಗಳಲ್ಲಿ ಲಭ್ಯ ಇರುವ ಸೀಟುಗಳ ಮಾಹಿತಿ ನೀಡುವುದು, ಸಹಾಯವಾಣಿಗಳನ್ನು ಆರಂಭಿಸುವುದು, ಅದಕ್ಕೆ ಕರೆ ಮಾಡುವವರಿಗೆ ಅಗತ್ಯ ಮಾಹಿತಿ ನೀಡುವುದು.
ಫೆ.8ರವರೆಗೆ ಶಾಲೆಗಳಲ್ಲಿ ಅಭಿಯಾನ
ಮಂಗಳೂರು: ಖಾಸಗಿ ಶಾಲೆಗಳಲ್ಲಿಯೂ ಬಡ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಆರ್ಟಿಇ ಕಾಯ್ದೆ ಜಾರಿಗೊಳಿಸಲು ಯುವ ಕಾಂಗ್ರೆಸ್ ವಿದ್ಯಾ ಸಹಾಯ ಹಸ್ತ ಆಭಿಯಾನ ಆರಂಭಿಸಿದೆ.
ಜ.27ರಂದು ಆರಂಭವಾಗಿ ಫೆ.8ರವರೆಗೆ ಶಾಲೆಗಳಲ್ಲಿ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಸರ್ಕಾರ ಅವಧಿಯಲ್ಲಿ 37 ಸಾವಿರ ಮಕ್ಕಳ ಉಚಿತ ಸೀಟುಗಳು ಖಾಲಿ ಬಿದ್ದಿತ್ತು. ಜಿಲ್ಲೆಯೊಂದರಲ್ಲಿಯೇ 160 ಶಾಲೆಗಳಲ್ಲಿ 1994 ಸೀಟ್ಗಳು ಹಾಗೆಯೇ ಉಳಿದಿತ್ತು. ಕಾರ್ಯಕರ್ತರು ಆರ್ಟಿಇ ಬಗ್ಗೆ ಹಳ್ಳಿ, ಹಳ್ಳಿ, ಶಾಲೆಗಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ, ಅರ್ಜಿಗಳನ್ನು ಭರ್ತಿ ಮಾಡುವ ಕೆಲಸ ಮಾಡಲಿದ್ದಾರೆ. ಶಾಲೆಗಳಲ್ಲಿ ಎಷ್ಟು ಸೀಟ್ ಬಾಕಿ ಉಳಿದಿವೆ ಎಂಬ ಮಾಹಿತಿ ನೀಡಲಿದ್ದಾರೆ ಎಂದರು. ಹೆಲ್ಪ್ ಲೈನ್ 9886540999 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ನೇಮಿರಾಜ್ ಶೆಟ್ಟಿ. ಶ್ರಿಹರಿ, ಎಂ.ರೇಗೋ, ಗಿರೀಶ್ ಅಳ್ವ ಇದ್ದರು.