ಕಟೀಲು 'ತ್ಯಾಜ್ಯ ದರ್ಶನ' ಮಾನವ ಹಕ್ಕು ಆಯೋಗಕ್ಕೆ
ಮಂಗಳೂರು: ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಅಧೀನದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ತ್ಯಾಜ್ಯ ಸಮಸ್ಯೆ ರಾಜ್ಯ ಮಾನವಹಕ್ಕು ಆಯೋಗ ತಲುಪಲಿದೆ.
ಕಟೀಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ದ.ಕ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ನೇತೃತ್ವದ ತಂಡ ರಾಜ್ಯದ ಯಾವುದೇ ದೇವಸ್ಥಾನದಲ್ಲೂ ಕಂಡುಬರದಷ್ಟು ಹೊಲಸು ಕಟೀಲಿನಲ್ಲಿ ಇರುವುದನ್ನು ಪತ್ತೆ ಮಾಡಿದೆ.
ಇದು ಭಕ್ತರ ಭಾವನೆಗಳಿಗೆ ಘಾಸಿ ಉಂಟು ಮಾಡುತ್ತಿದೆ, ಶೌಚಾಲಯ ಸೇರಿದಂತೆ ಎಲ್ಲ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಅದೇ ನೀರನ್ನು ಮೂರ್ನಾಲ್ಕು ಗ್ರಾಮಗಳು ಕುಡಿಯಲು ಬಳಸುತ್ತವೆ, ಧಾರ್ಮಿಕ ವಿನಿಯೋಗಕ್ಕೂ ಮಲಿನ ನೀರು!
ಜ.16ರಂದು ಜಿ.ಪಂ. ಅಧ್ಯಕ್ಷ ಕೊರಗಪ್ಪ ನೇತೃತ್ವದ 9 ಮಂದಿ ತಂಡ ಕಟೀಲಿಗೆ ಭೇಟಿ ನೀಡಿತ್ತು. ಎರಡು ಗಂಟೆ ಅವಧಿಯಲ್ಲಿ ಕಂಡ ತ್ಯಾಜ್ಯ ದರ್ಶನವನ್ನು ಸೀಡಿ ಹಾಗೂ ಫೋಟೋ ರೂಪದಲ್ಲಿ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಲಿದೆ. ಅಲ್ಲದೆ ರಾಜ್ಯಪಾಲರು, ಮೈಸೂರು ಕಂದಾಯ ವಿಭಾಗೀಯ ಆಯುಕ್ತರಿಗೆ, ಮುಖ್ಯಮಂತ್ರಿಗೆ, ಧಾರ್ಮಿಕ ದತ್ತಿ ಸಚಿವರಿಗೆ ನೀಡಲಿದೆ.
ತ್ಯಾಜ್ಯವೆಲ್ಲ ನಂದಿನಿ ಒಡಲಿಗೆ: ಕಟೀಲು ದೇವಳದ ಅನ್ನಛತ್ರದ ಊಟದ ಬಾಳೆಎಲೆ, ಹಾಳೆ ತಟ್ಟೆ ಸಹಿತ ತ್ಯಾಜ್ಯವನ್ನು ನಿತ್ಯ ಹೊಳೆಬದಿಗೆ ಸುರಿಯುತ್ತಾರೆ. ದೇವಸ್ಥಾನದ ತ್ಯಾಜ್ಯ ನೀರನ್ನು ನೇರವಾಗಿ ಪೈಪ್ ಮೂಲಕ ನಂದಿನಿ ಹೊಳೆಗೆ ಹರಿಸುತ್ತಾರೆ. ದೇವಸ್ಥಾನದ ಸಾರ್ವಜನಿಕ ಶೌಚಾಲಯದ ಹಿಂದೆ ಪಿಟ್ನಲ್ಲಿದ್ದ ಮಲದ ತ್ಯಾಜ್ಯವನ್ನು ಬಯಲಿಗೆ ಬಿಡಲಾಗಿದೆ. ರಾತ್ರಿ ಹೊತ್ತು ಪಿಟ್ನಲ್ಲಿದ್ದ ತ್ಯಾಜ್ಯವನ್ನು ಹೊಳೆಗೆ ನೇರವಾಗಿ ವಿಲೇವಾರಿ ಮಾಡುತ್ತಿರುವುದು ಪತ್ತೆಯಾಗಿದೆ.
ನಂದಿನಿ ಪಕ್ಕದಲ್ಲಿರುವ ದೇವಾಲಯದ ಎಲ್ಲ ವಸತಿ ಸಂಕೀರ್ಣಗಳ ತ್ಯಾಜ್ಯ ನೀರನ್ನು ರಸ್ತೆ ಬದಿ ಚರಂಡಿ ಮೂಲಕ ಹೊಳೆಗೆ ಬಿಡಲಾಗುತ್ತಿದೆ. ಈ ವಸತಿಗೃಹಕ್ಕೆ ಗ್ರಾಮ ಪಂಚಾಯ್ತಿ ಪರವಾನಗಿ ನೀಡಿಲ್ಲ. ದೇವಸ್ಥಾನ ಅಧೀನದ ಯಾವುದೇ ವಸತಿಗೃಹಗಳಿಗೆ ಇಂಗುಗುಂಡಿ ಇಲ್ಲ. ಘನತ್ಯಾಜ್ಯವನ್ನು ಹೊಟೇಲೊಂದರ ಹಿಂದುಗಡೆ ದೇವಸ್ಥಾನದ ಜಮೀನಿನಲ್ಲಿ ಸುಡುತ್ತಿದ್ದಾರೆ, ನಂತರ ಹೊಳೆಗೆ ತಳ್ಳುತ್ತಾರೆ. ಊಟದ ನಂತರ ಬಿಸಾಡುವ ಬಾಳೆ ಎಲೆ, ಇತರೆ ಘನತ್ಯಾಜ್ಯವನ್ನು ಒಂದು ಸಣ್ಣ ಗುಂಡಿಯಲ್ಲಿ ಹಾಕುತ್ತಾರೆ, ಯಾವುದೇ ವೈಜ್ಞಾನಿಕ ನಿರ್ವಹಣೆ ಮಾಡುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಹಳ್ಳಿಗಳಿಗೆ ಕಲುಷಿತ ನೀರು: ಕಟೀಲಿನಿಂದ ನಂದಿನಿ ನದಿ ಹರಿಯುವ ನಡುಗೋಡು, ಶಿಬರೂರು, ಚೇಳೈರು ಗ್ರಾಮಗಳಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಗ್ರಾಮಗಳಲ್ಲದೆ ಮನ್ನಬೆಟ್ಟು, ಎಕ್ಕಾರು, ಸೂರಿಂಜೆ ಪಂಚಾಯ್ತಿಗಳು ಕೃಷಿ ಹಾಗೂ ಕುಡಿಯಲು ಬಳಸುವುದು ಇದೇ ಮಲಿನ ನೀರನ್ನು. ಪ್ರಯೋಗಾಲಯ ವರದಿಯಲ್ಲಿ ಈ ಕಲುಷಿತ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ. ಆದರೂ ಪರ್ಯಾಯ ಜಲ ಮೂಲವಿಲ್ಲದೆ ಇದೇ ನೀರನ್ನು ಅನಿವಾರ್ಯವಾಗಿ ಬಳಸುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
ರೋಗಕ್ಕೆ 'ಅಭಯ' ಸಿಕ್ಕಿಲ್ಲ: ಕಟೀಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಇದೇ ಕ್ಷೇತ್ರದ ಸಚಿವರು 'ಅಭಯ' ಹಸ್ತ ತೋರಿಲ್ಲ. ಹಾಗಾಗಿ ತ್ಯಾಜ್ಯ ಸಮಸ್ಯೆ ಜ್ವಲಂತವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ರಾಜಕೀಯ ಲೆಕ್ಕಾಚಾರದಲ್ಲಿ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
'ಕಟೀಲಿನ ತ್ಯಾಜ್ಯ ಸಮಸ್ಯೆ ನಿವಾರಿಸುವಂತೆ ಅನೇಕ ಬಾರಿ ಸಂಬಂಧಿತರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇಲ್ಲಿ ಭಕ್ತರಿಗೆ ಮೂಲಸೌಕರ್ಯವೂ ಇಲ್ಲ. ಹಾಗಾಗಿ ಜಿ.ಪಂ. ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಇದಕ್ಕೆ ಸರ್ಕಾರವೂ ಸ್ಪಂದಿಸದಿದ್ದರೆ ಹೈಕೋರ್ಟ್ಗೆ ದೂರು ನೀಡಲಾಗುವುದು' ಎನ್ನುತ್ತಾರೆ ಸ್ಥಳೀಯ ಜಿ.ಪಂ. ಸದಸ್ಯ ಈಶ್ವರ ಕಟೀಲ್.
'ಕಟೀಲು ದೇವಸ್ಥಾನದ ತ್ಯಾಜ್ಯ ಸಮಸ್ಯೆಯನ್ನು ಧಾರ್ಮಿಕ ದತ್ತಿ ಇಲಾಖೆ ಸರಿಪಡಿಸಿ ನಿರ್ವಹಿಸಬೇಕಿತ್ತು. ಅದರಲ್ಲೂ ರಾಜಕೀಯ ಆಟ ನಡೆಯುತ್ತಿದೆ. ಸಾಂಕ್ರಾಮಿಕ ರೋಗ ಬರುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಕಟೀಲಿನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿಗೆ ವಹಿಸಿಕೊಡಬೇಕು.'
- ಕೊರಗಪ್ಪ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ
'ಕಟೀಲು ದೇವಸ್ಥಾನದ ತ್ಯಾಜ್ಯ ಸಮಸ್ಯೆ ನಿವಾರಣೆಗೆ ರು. 1 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನಿಮೂಲನಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಒಂದು ವರ್ಷದೊಳಗೆ ಇದನ್ನು ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ.'
- ಕೃಷ್ಣಮೂರ್ತಿ, ದೇವಸ್ಥಾನದ ಆಡಳಿತಾಧಿಕಾರಿ.
-ಆತ್ಮಭೂಷಣ್