ತಾಕತ್ತಿದ್ದರೆ ಕಾಂಗ್ರೆಸ್ ಸಿಗರೇಟ್, ತಂಬಾಕು, ಮದ್ಯ ನಿಷೇಧಿಸಲಿ: ಬಿ.ಎಸ್. ಯಡಿಯೂರಪ್ಪ
ಪುತ್ತೂರು: ಹಬ್ಬ ಹರಿದಿನಗಳಲ್ಲಿ ತಾಂಬೂಲಕ್ಕೆ ಬಳಸುವ ಅಡಕೆಯನ್ನು ನಿಷೇಧ ಮಾಡಲು ಹೊರಟಿರುವ ಕಾಂಗ್ರೆಸ್ ತಾಕತ್ತಿದ್ದರೆ ಸಿಗರೇಟ್, ತಂಬಾಕು, ಮದ್ಯವನ್ನು ನಿಷೇಧಿಸಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು.
ಅವರು ಸೋಮವಾರ ಸಂಜೆ ಕಾಸರಗೋಡಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿ ಮಧ್ಯೆ ಪುತ್ತೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು.
ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್, ರೈತರಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದೆ. ಈಗಾಗಲೇ ಕೊಳೆರೋಗ, ನುಸಿರೋಗದಿಂದ ಹೈರಾಣಾಗಿರುವ ಅಡಕೆ ಬೆಳೆಗಾರರ ಬದುಕು ಕಾಂಗ್ರೆಸ್ನ ಅಡಕೆ ನಿಷೇಧದ ನಿರ್ಧಾರದಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಅಡಕೆ ಬೆಳೆಗಾರರು ಮೇಲೆಳದಿರುವಂತೆ ಮಾಡಿದ ವ್ಯವಸ್ಥಿತ ಹುನ್ನಾರ ಇದಾಗಿದ್ದು, ಅಡಕೆ ನಿಷೇಧ ಮಾಡುವಂತೆ ಈಗಾಗಲೇ ಸಲ್ಲಿಸಿರುವ ಅಫಿದಾವಿತ್ ಹಿಂದೆಗೆದುಕೊಳ್ಳದೆ, ಇನ್ನೊಂದು ಅಫಿದಾವಿತ್ ಸಲ್ಲಿಸಲು ಸಾಧ್ಯವಿಲ್ಲ ಎಂದರು.
ಅಲ್ಪಸಂಖ್ಯಾತರ ಓಲೈಕೆಗೆ ಕೀಳು ಮಟ್ಟ: ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕಾದರೂ ಇಳಿಯಬಹುದು ಎನ್ನುವುದಕ್ಕೆ ಮಲ್ಲಿಕಾರ್ಜುನ ಬಂಡೆಯ ಸಾವು ಉದಾಹರಣೆ ಎಂದ ಅವರು, ಬಂಧನ ಮಾಡಲು ಹಿಂದೂ- ಮುಸ್ಲಿಂ ಎಂಬ ಬೇಧ ಏಕೆ. ಮಲ್ಲಿಕಾರ್ಜುನ ಬಂಡೆಯ ಪ್ರಕರಣವನ್ನು ಸಿಬಿಐಗೆ ನೀಡಲು ಹಿಂದೆ-ಮುಂದೆ ನೋಡುವುದೇಕೆ ಎಂದು ಪ್ರಶ್ನಿಸಿದರು.
ಮೋದಿಗೆ ಸರಿಸಮನಾದ ವ್ಯಕ್ತಿ ಕಾಂಗ್ರೆಸ್ನಲ್ಲಿ ಇಲ್ಲ ಎಂಬುದನ್ನು ಅವರೇ ಒಪ್ಪಿಕೊಂಡಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿದರು.