ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಾಲಿಬೆಟ್ಟ: ಸರ್ಕಾರಿ ಬಸ್ ಸಂಚಾರ, ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

Vishwanath S
Updated On : 28 Jan 2014, 11:32 am

ಸಿದ್ದಾಪುರ: ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಹಾಗೂ ರಾತ್ರಿ ವೇಳೆ ನಿಲುಗಡೆಗೆ ಒತ್ತಾಯಿಸಿ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಖಾಸಗಿ ಬಸ್‌ಗಳ ಪರವಾಗಿ, ಸರ್ಕಾರಿ ಬಸ್ ಸಂಚಾರದ ವಿರುದ್ಧ ಎ.ಕೆ. ಸುಬ್ಬಯ್ಯ ಪ್ರಚಾರ ಮಾಡುತ್ತಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು, ರಾಜಕೀಯದಲ್ಲಿ ದೊಂಬರಾಟ ಮಾಡುತ್ತಿರುವ ಸುಬ್ಬಯ್ಯ ಖಾಸಗಿ ಬಸ್ಸುಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಬಸ್‌ಗಳು ಪಾಲಿಬೆಟ್ಟದಲ್ಲಿ ರಾತ್ರಿ ವೇಳೆ ನಿಲುಗಡೆಗೊಳ್ಳುತ್ತಿದ್ದು, ಇದರಿಂದ ಸಾರಿಗೆ ಸಂಸ್ಥೆಗೆ ನಷ್ಟವುಂಟಾಗುತ್ತಿದೆ ಎಂಬ ನೆಪವೊಡ್ಡಿ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಪಾಲಿಬೆಟ್ಟ ಬಸ್ ನಿಲ್ದಾಣದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಒಗ್ಗೂಡಿ ಪ್ರತಿಭಟನೆ ನಡೆಸಿದರು.
ಹಿತ ರಕ್ಷಣಾ ಸಮಿತಿಯ ಪದಾಧಿಕಾರಿ ಅಜಿತ್ ಕುರುಂಬಯ್ಯ ಮಾತನಾಡಿ, ವಕೀಲ ಎ.ಕೆ. ಸುಬ್ಬಯ್ಯ ಸಮಾಜ ಬಾಂಧವರಲ್ಲಿ ಒಡಕುಂಟು ಮಾಡುವುದರೊಂದಿಗೆ ಪ್ರಮುಖ ಘಟನೆಗಳಿಗೂ ಕಾರಣ ಕರ್ತರಾಗಿದ್ದಾರೆ. ರಾಜಕೀಯದಲ್ಲಿ ದೊಂಬರಾಟ ಮಾಡುತ್ತಿದ್ದು, ಇದೀಗ ಸಾರ್ವಜನಿಕ ಸೇವೆಯಲ್ಲಿರುವ ಸಮಾಜ ಸೇವಕ ವಿವೇಕ್ ಪೂವಯ್ಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ರಾತ್ರಿ ವೇಳೆ ಬಸ್ ನಿಲುಗಡೆ ಮಾಡಬಾರದು ಎಂದು ದೂರು ನೀಡಿರುವುದನ್ನು ಖಂಡಿಸುತ್ತೇವೆ ಎಂದರು.
ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿಲ್ಲ. ಸೂಕ್ತ ಸಮಯ ಪಾಲನೆಯೂ ಮಾಡದೆ ಸಂಚರಿಸುತ್ತಿದ್ದು, ಇದರಿಂದ ಗ್ರಾಮಸ್ಥರು, ಕಾರ್ಮಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗುತ್ತಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶಗಳಿಗೂ ಸಾರಿಗೆ ಸಂಸ್ಥೆಯ ಬಸ್ ಸೇವೆಯನ್ನು ಕಲ್ಪಿಸಿರುವ ವಿವೇಕ್ ಪೂವಯ್ಯ ಯಾವುದೇ ಫಲಪೇಕ್ಷೆ ಬಯಸದೆ ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಬೇಕಿದ್ದು, ಅವರ ವಿರುದ್ಧವೇ ಕೆಲವರು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಕುಟ್ಟಂಡ ವಸಂತ್ ಮಾತನಾಡಿ, ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್‌ಗಳ ಸಂಚಾರದಿಂದ ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದು ಹೋಗುವ ಕಾರ್ಮಿಕರಿಗೆ ಅನುಕೂಲವಾಗಿದ್ದು, ಇದರಿಂದ ಕಾಫಿ ಬೆಳೆಗಾರರಿಗೆ ಎದುರಾಗುವ ಕಾರ್ಮಿಕ ಸಮಸ್ಯೆಯೂ ಬಗೆ ಹರಿಯುತ್ತದೆ ಎಂದರು.
ವಿ.ಎಸ್.ಎಸ್.ಎನ್. ಅಧ್ಯಕ್ಷ ವಿಜು ಸುಬ್ರಹ್ಮಣಿ ಮಾತನಾಡಿ, ಸಾರಿಗೆ ಬಸ್ ಸಂಚಾರದಿಂದ ಶಾಲಾ ವಿದ್ಯಾರ್ಥಿಗಳಿಗೂ ಪ್ರಯೋಜನವಾಗಿದ್ದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಪೋಷಕರಿಗೆ ಹೆಚ್ಚು ಹೊರೆ ಕಡಿಮೆಯಾಗಿದೆ ಎಂದರು.  ಚೆನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷ ಪುತ್ರ ಪೂಣಚ್ಚ, ಸ್ಥಳೀಯರಾದ ಮೈಕಲ್, ವಿಜೇಶ್, ದಲಿತ ಸಂಘದ ಸತೀಶ್, ನಲ್ಲಮಕ್ಕಡ ರಾಮು, ದೀಪಕ್, ಗಣಪತಿ, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement