ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಪ್ರಜಾಪ್ರಭುತ್ವ ದಿನಾಚರಣೆ ವಿರೋಧಿಸಿ' ಸಿಪಿಎಂ 24 ಗಂಟೆ ಧರಣಿ ಸಮಾರೋಪ

Vishwanath S
Updated On : 28 Jan 2014, 11:29 am

ಪುತ್ತೂರು: ವಿವಿಧ ಸಮಸ್ಯೆಗಳು ಈಡೇರುವ ತನಕ ಅರ್ಥವಿಲ್ಲದ ಪ್ರಜಾಪ್ರಭುತ್ವ ದಿನಾಚರಣೆ ಬೇಡ ಎಂದು ಆಗ್ರಹಿಸಿ ಸಿಪಿಐಎಂ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಸಮಿತಿಗಳ ಸಹಯೋಗದಲ್ಲಿ ಇಲ್ಲಿನ ಸಹಾಯಕ ಕಮಿಷನರ್ ಕಚೇರಿ ಮುಂಭಾಗದಲ್ಲಿ ಭಾನುವಾರ ಆರಂಭಗೊಂಡ 24 ಗಂಟೆಗಳ ಧರಣಿ ಸತ್ಯಾಗ್ರಹ ಸೋಮವಾರ ಪೂರ್ಣಗೊಂಡಿತು. ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಸಮಾರೋಪ ಕಾರ್ಯಕ್ರಮ ನಡೆಯಿತು.
ಸಮಾರೋಪ ಭಾಷಣ ಮಾಡಿದ ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಎಂ. ಭಟ್ ಮಾತನಾಡಿ, ದೇಶದಲ್ಲಿ ಪಾಳೆಗಾರಿಕೆ, ದಬ್ಬಾಳಿಕೆ, ಭ್ರಷ್ಟಾಚಾರ, ಅತ್ಯಾಚಾರ, ಮಾಡುವರಿಗಾಗಿ ದೊಡ್ಡ ಬಂಡವಾಳಶಾಹಿ ಭೂಮಾಲೀಕರ ಮೈತ್ರಿಯೊಂದಿಗೆ ಪ್ರಜೆಗಳಿಂದ ಮತ ಪಡೆದು ಭ್ರಷ್ಟರೇ ನಡೆಸುವ ಸರ್ಕಾರ ಇರುವುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ ಎಂದರು.
ಕಳೆದ 5 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 24,600 ಮಹಿಳಾ ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈಗಲೂ ಅತ್ಯಾಚಾರ, ಕೋಮುವಾದಿಗಳ ನೈತಿಕ ಪೊಲೀಸ್‌ಗಿರಿ, ಮಹಿಳಾ ದೌರ್ಜನ್ಯಗಳು ನಡೆಯುತ್ತಲೇ ಇವೆ. ದೇರಳಕಟ್ಟೆ ಪ್ರಕರಣ, ಸದನದಲ್ಲಿ ಬ್ಲೂಫಿಲಂ ವೀಕ್ಷಣೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಇವೆಲ್ಲದರ ನಡುವೆ ಪ್ರಜಾಪ್ರಭುತ್ವ ದಿನಾಚರಣೆಗೆ ಅರ್ಥವಿದೆಯೇ ಎಂದು ಪ್ರಶ್ನಿಸಿದರು.
ರೈತರ ಒಕ್ಕಲೆಬ್ಬಿಸಲು ಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರೀಯ ಉದ್ಯಾವನ, ಅಭಯಾರಣ್ಯ, ಆನೆ ಕಾರಿಡಾರ್, ಕಸ್ತೂರಿ ರಂಗನ್ ವರದಿ, ಪೈಪ್‌ಲೇನ್, ಗ್ಯಾಸ್‌ಲೇನ್ ಎಂದೆಲ್ಲಾ ಹೇಳಿ ಬಡ ರೈತರಲ್ಲಿದ್ದ ಕನಿಷ್ಠ ಭೂಮಿ ಕಸಿಯಲು ಕಾನೂನು ಮಾಡುವುದು ಪ್ರಜಾ ವಿರೋಧಿ ಎಂದು ಬಿ.ಎಂ. ಭಟ್ ಹೇಳಿದರು.
ಸಿ.ಪಿ.ಐ.ಎಂ. ಬೆಳ್ತಂಗಡಿ ಮುಖಂಡ ಶ್ಯಾಮರಾಜ್ ಮನವಿ ಪತ್ರ ವಾಚಿಸಿದರು. ಪುತ್ತೂರು ತಾಲೂಕು ಸಮಿತಿ ಕಾರ್ಯದರ್ಶಿ ಪಿ.ಕೆ.ಸತೀಶನ್ ಸ್ವಾಗತಿಸಿದರು.  ಸುಳ್ಯದ ಮುಖಂಡ ಶಿವರಾಮ್, ಸಿ.ಐ.ಟಿ.ಯುವಿನ ನೆಬೀಸಾ, ಜಯರಾಮ, ರಿಕ್ಷಾ ಚಾಲಕ ಸಂಘದ ರಿಯಾಝ್ ಮಾಂತೂರು ಇದ್ದರು.
ಶೇಖರ್ ಲೈಯ್ಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement