ಮಾನವೀಯತೆ ಮೈಗೂಡಿಸುವ ಮೂಲಕ ದೇಶದ ಅಭಿವೃದ್ಧಿ
ಸುಂಟಿಕೊಪ್ಪ: ಜಾತಿ, ಧರ್ಮ ಭೇದ-ಭಾವವನ್ನು ಮರೆತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಅಭಿಪ್ರಾಯಪಟ್ಟರು.
ಸಮಸ್ತ ಕೇರಳ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್‌ನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಭಾನುವಾರ ನಡೆದ ಮಾನವ ಸರಪಳಿ ಮತ್ತು ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಟ್ಟ ನಿಲುವು ಬೇಡ: ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಎಲ್ಲ ಧರ್ಮಗಳು ಕೂಡ ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಮಾನವೀಯತೆಯನ್ನು ಬೋಧಿಸುತ್ತವೆಯೆ ವಿನಃ ದುಷ್ಕೃತ್ಯಗಳನ್ನು ಪ್ರಚೋದಿಸುವದಿಲ್ಲ ಎಂದು ಹೇಳಿದರು.
ಯಾರೋ ಮಾಡಿದ ತಪ್ಪಿಗೆ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ದೂಷಿಸುವದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ರಾಜೇಂದ್ರ, ಪ್ರತಿ ಗ್ರಾಮಗಳಲ್ಲಿ ಇಂತಹ ಸರ್ವಧರ್ಮ ಸಮ್ಮೇಳನ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾವಂದೂರು ಶ್ರೀ ಬಸವಕೇಂದ್ರದ ಶ್ರೀ ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ ಸಮಾಜಕ್ಕೆ ಒಳಿತನ್ನು ಬಯಸುವ ಶ್ರೀ ಬಸವಣ್ಣರವರ ವಚನಗಳ ಮೂಲಕ ಅಧ್ಯಾತ್ಮಿಕ ಸಂದೇಶಗಳನ್ನು ಸಾರಲಾಗುತ್ತಿದೆ. ಬಸವಣ್ಣರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಪೋಷಕರು ಮಕ್ಕಳ ಮುಂದೆ ಯಾವುದೇ ತಪ್ಪು ಮಾಡದಂತೆ ಮತ್ತು ಕೋಮು ಸಂಘರ್ಷಣೆಯನ್ನು ಮೆಟ್ಟಿನಿಲ್ಲುವಂತೆ ಕರೆಯಿತ್ತರು.
ಸಂತ ಅಂತೋನಿ ದೇವಾಲಯದ ಧರ್ಮಗುರು ರೆ.ಫಾ. ಎಡ್ವರ್ಡ್ ವಿಲಿಯಂ ಸಲ್ಡಾನ ಮಾತನಾಡಿ, ಮನುಷ್ಯನು ದೇಹದ ವಸ್ತ್ರ ವಿನ್ಯಾಸಕ್ಕಿಂತ ಆಧ್ಯಾತ್ಮದತ್ತ ಒಲವು ತೋರುವದರಿಂದ ಮಾನವೀಯ ಮೌಲ್ಯ ಹೆಚ್ಚುತ್ತದೆ. ಮಾನವಿಯತೆಯನ್ನು ಮೈಗೂಡಿಸಿಕೊಂಡಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬಾಳಬಹುದಾಗಿದೆ ಎಂದರು.
ಮಂಗಳೂರಿನ ಯಾಸಿರ್ ಅರಫಾತ್ ಅಲ್ಕೌಸರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎ. ಉಸ್ಮಾನ್, ಕೆ.ಇ. ಕರೀಂ, ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿ ಮಾಧ್ಯಮ ಸಂಚಾಲಕರಾದ ಸಿ.ಎಂ. ಹಮೀದ್ ಮುಸ್ಲಿಯಾರ್, ಸುಂಟಿಕೊಪ್ಪ ಮುದ್ರರಿಸ್ ಉಸ್ಮಾನ್‌ಫೈಜಿ, ಹಾಗೂ ಇನ್ನಿತರರು ಇದ್ದರು. ತಮ್ಲಿಕ್ ಸ್ವಾಗತಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮಾರಂಭದ ಮೊದಲಿಗೆ ಗದ್ದೆಹಳ್ಳದ ನೂರುಲ್‌ಜಮ್ಮಾ ಮಸೀದಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಧಾರ್ಮಿಕ ಐಕ್ಯತೆಯ ಘೋಷಣೆ, ಮತ್ತು ದಫ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು.