ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎತ್ತಿನಹೊಳೆ ವಿರುದ್ಧ ರೈಲು ತಡೆ ಪ್ರತಿಭಟನೆ

Vishwanath S
Updated On : 29 Jan 2014, 11:17 am

ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿ ಜೀವನದಿ ನೇತ್ರಾವತಿ ರಕ್ಷಣಾ ಸಮಿತಿ ಮಂಗಳವಾರ ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದಲ್ಲಿ ರೈಲು ತಡೆ ಪ್ರತಿಭಟನೆ ನಡೆಸಿತು.
 ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಹತ್ತು ನಿಮಿಷ ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಲುವಿಗೆ ಧಿಕ್ಕಾರ ಕೂಗಿದರು. ಜ.30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
 ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನ ಸರ್ಕಾರ ಆರಂಭಿಸಿದ ಎತ್ತಿನಹೊಳೆ ಯೋಜನೆಯನ್ನು ಈಗಿನ ಸರ್ಕಾರ ಮುಂದುವರಿಸಿದೆ. ಇದನ್ನು ಪಕ್ಷಾತೀತವಾಗಿ ವಿರೋಧಿಸುತ್ತೇವೆ. ಯೋಜನೆ ಕೈಬಿಡುವ ವರೆಗೆ ಹಂತ ಹಂತವಾಗಿ ಚಳುವಳಿ ನಡೆಸಲಾಗುವುದು. ಮಂಗಳೂರಿಗೆ ಡಿಸೆಂಬರ್‌ನಿಂದ ನೇತ್ರಾವತಿ ನೀರು ಬತ್ತುವುದರಿಂದ ಕುಡಿವ ನೀರಿನ ಬರ ಉಂಟಾಗುತ್ತಿದೆ. ಜಿಲ್ಲೆಯ ಸಚಿವರು, ಶಾಸಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನೈಸರ್ಗಿಕ ನೀರನ್ನು ತಿರುಗಿಸುವುದು ಸರಿಯಲ್ಲ ಎಂದರು.
 ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಮಾತನಾಡಿ, ನೇತ್ರಾವತಿ ನದಿ ನಿಮ್ಮ ಕುಟುಂಬದ ಆಸ್ತಿಯೇ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದರನ್ನು ಪ್ರಶ್ನಿಸಿದ ಅವರು, ಪಕ್ಷದ ಕಾರ್ಯಕರ್ತರ, ಜನಪ್ರತಿನಿಧಿಗಳ, ಮಾಧ್ಯಮ ಸಂವಾದ ನಡೆಸದೆ ಯೋಜನೆ ಹೇಗೆ ಜಾರಿಗೊಳಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅವರ ವೈಯಕ್ತಿಕ ಲಾಭಕ್ಕಾಗಿ ಈ ಯೋಜನೆ ಪರವಾಗಿ ಮಾತನಾಡುತ್ತಿದ್ದು, ಯೋಜನೆ ಜಾರಿಗೆ ಮುಂದಾದರೆ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಹೇಳಿದರು.
 ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮಾತನಾಡಿ, ನೇತ್ರಾವತಿ ಉಳಿವಿಗಾಗಿ ಕೇಂದ್ರ ಹಾಗೂ ರಾಜ್ಯದ ಗಮನ ಸೆಳೆಯಲು ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಯೋಜನೆ ಜಾರಿಗೆ ಮುನ್ನ ಸಂಬಂಧಿತರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ತಪ್ಪಿದಲ್ಲಿ ಜಲಯುದ್ಧಕ್ಕೆ ಕಾರಣವಾದೀತು ಎಂದು ಎಚ್ಚರಿಸಿದರು.
ಇದು ಮೋಸದ ಯೋಜನೆಯಾಗಿದ್ದು, ಭ್ರಷ್ಟಾಚಾರದ ವಾಸನೆ ಇದೆ. ಪರಿಸರ ನಾಶದ ಯೋಜನೆಯನ್ನು ಕೈಬಿಡುವ ವರೆಗೆ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿದರು. ನದಿ ತಿರುವು, ಎತ್ತಿನಹೊಳೆ ಜಾರಿ, ಕುಡಿವ ನೀರು, ಪರಿಸರ ನಾಶ, ಪಶ್ಚಿಮಘಟ್ಟಕ್ಕೆ ಅಪಾರ ಹಾನಿ ಕಾರಣಕ್ಕೆ ಯೋಜನೆ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
31ರಂದು ಮಾನವ ಸರಪಳಿ
ಮಂಗಳೂರು: ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿಯೇ ಸಿದ್ಧ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿರುವ ಹಿನ್ನೆಲೆಯಲ್ಲಿ 31ರಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ ಜಿಲ್ಲೆಯ ಸಂಘಟನೆಗಳೊಂದಿಗೆ ಮಂಗಳೂರಿನಲ್ಲಿ ಮಾನವ ಸರಪಳಿ ನಿರ್ಮಿಸಿ  ಕರಾಳ ದಿನವನ್ನಾಗಿ ಆಚರಿಸಲಿದೆ. ಸಂಜೆ 4ರಿಂದ ಪ್ರತಿಭಟನೆ ನಡೆಯಲಿದೆ ಎಂದು ಸಂಘಟಕ ದಿನೇಶ್ ಹೊಳ್ಳ  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement