ಮುಗಿದ ಏಜೆನ್ಸಿ ಅವಧಿ; ಹೊಸ ಏಜೆನ್ಸಿ ಚಕಾರವಿಲ್ಲ
ಮಂಗಳೂರು: ಕಳೆದ ಮಾರ್ಚ್ ಗುತ್ತಿಗೆ ಏಜೆನ್ಸಿ ಅವಧಿ ಮುಗಿದಿದೆ, ಏಪ್ರೀಲ್ನಲ್ಲಿ ಗುತ್ತಿಗೆ ಮುಗಿದರೂ ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಹೇಳಿದ್ದರು. ಮೇನಲ್ಲಿ ಹೊಸ ಏಜೆನ್ಸಿ ಗುತ್ತಿಗೆ ಪಡೆದಿದೆ. ಹಿಂದಿನ ಗುತ್ತಿಗೆ ಏಜೆನ್ಸಿಯಡಿ ಕಾಮಗಾರಿ ನಿರ್ವಹಿಸಿದ ಎಂಜಿನಿಯರ್ರು ಈಗಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ಏಪ್ರೀಲ್ನಿಂದ ಈವರೆಗೆ 9 ತಿಂಗಳಿಂದ ವೇತನ ಬಾಕಿ ಇದೆ. ಇದನ್ನು ಪಾವತಿಸುವ ವಿಚಾರದಲ್ಲಿ ಏಜೆನ್ಸಿ ಸರ್ಕಾರದ ಕಡೆಗೆ, ಸರ್ಕಾರ ಏಜೆನ್ಸಿ ಕಡೆಗೆ ಕೈ ತೋರಿಸುತ್ತಿವೆ.
ಸರ್ವ ಶಿಕ್ಷಣ ಅಭಿಯಾನದಡಿ ಪ್ರಾಥಮಿಕ ಶಾಲೆಗಳ ಸಿವಿಲ್ ಕಾಮಗಾರಿ ನಡೆಸುತ್ತಿರುವ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಹೊರಗುತ್ತಿಗೆಯ ಎಂಜಿನಿಯರ್ಗಳು ಕಳೆದ ಒಂದು ವರ್ಷದಿಂದ ತಮಗೆ ಬರಬೇಕಾದ ಮೊತ್ತಕ್ಕಾಗಿ ನಡೆಸುವ ಪರದಾಟ ಇದು.
9 ತಿಂಗಳಿಂದ ಬವಣೆ: ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ಕಾಮಗಾರಿ ನಡೆಸುವುದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ಆದರೆ ಕಾಮಗಾರಿಯ ತಾಂತ್ರಿಕ ಸಲಹೆ ಎಂಜಿನಿಯರ್ಗಳದ್ದು. ಈ ಎಂಜಿನಿಯರ್ರನ್ನು ಸರ್ವ ಶಿಕ್ಷಣ ಇಲಾಖೆಯೇ ಗುತ್ತಿಗೆ ಏಜೆನ್ಸಿ ಮೂಲಕ ನೇಮಿಸುತ್ತದೆ. ಜಿಲ್ಲೆಗೊಬ್ಬ ಜಿಲ್ಲಾ ಮಟ್ಟದ ಎಂಜಿನಿಯರ್ಗೆ ಮಾಸಿಕ ರು. 25 ಸಾವಿರ, ಬ್ಲಾಕ್ ಮಟ್ಟದ ಎಂಜಿನಿಯರ್ಗೆ ರು. 19 ಸಾವಿರ ವೇತನ ನಿಗದಿಪಡಿಸಲಾಗಿದೆ. ಇದರಲ್ಲಿ ರು. 4 ಸಾವಿರ ಪ್ರವಾಸ ಭತ್ಯೆ ಒಳಗೊಂಡಿದೆ. ಪ್ರತಿ ತಿಂಗಳು ಬಿಲ್ ಕಳುಹಿಸಿದ ಬಳಿಕ ಏಜೆನ್ಸಿ ಎಂಜಿನಿಯರ್ಗಳ ಖಾತೆಗೆ ಮೊತ್ತ ಜಮೆ ಮಾಡುತ್ತದೆ. ಕರ್ನಾಟಕ ಹ್ಯಾಬಿಟೆಟ್ ಸೆಂಟರ್ ಏಜೆನ್ಸಿ ಅವಧಿ 2013 ಮಾರ್ಚ್ಗೆ ಮುಗಿದಿತ್ತು. ಏಪ್ರಿಲ್ನಲ್ಲಿ ಯಾವುದೇ ಏಜೆನ್ಸಿ ನೇಮಕವಾಗಿರಲಿಲ್ಲ. ಮೇನಲ್ಲಿ ಹೊಸದಾಗಿ ಆಸ್ಟ್ರಿಕ್ ಟೆಕ್ನಾಲಜಿ ಏಜೆನ್ಸಿ ಪಡೆದಿತ್ತು. ಹಳೆ ಏಜೆನ್ಸಿ ರದ್ದಾದ್ದರಿಂದ ಏಪ್ರಿಲ್ನ ವೇತನ ಯಾರು ಪಾವತಿಸಬೇಕು ಎಂಬ ಗೊಂದಲ ಉಂಟಾಗಿದೆ. ಮೇನಿಂದ ಹೊಸ ಏಜೆನ್ಸಿ ಕಾರ್ಯನಿರ್ವಹಿಸಿದರೂ ಇದುವರೆಗೆ ವೇತನ ಕೈಸೇರಿಲ್ಲ.
'ಏಜೆನ್ಸಿಯವರು ನೀಡಿದ ಮೇನಿಂದ 3 ತಿಂಗಳ ಬಿಲ್ ನೀಡಿದ್ದರಲ್ಲಿ ತಪ್ಪಾಗಿದೆ. ಅದನ್ನು ಸರಿಪಡಿಸುವಂತೆ ಕೋರಲಾಗಿದೆ. ಆಗಸ್ಟ್ ನಂತರದ ಬಿಲ್ ಸಲ್ಲಿಸುವಂತೆ ಸೂಚಿಸಿದ್ದರೂ ಏಜೆನ್ಸಿ ಸ್ಪಂದಿಸಿಲ್ಲ. 3 ತಿಂಗಳ ಬಿಲ್ ಪಾವತಿಗೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ' ಎನ್ನುತ್ತಾರೆ ಸರ್ವಶಿಕ್ಷಣ ಅಭಿಯಾನ ಅಧಿಕಾರಿ ಶ್ರೀಧರ್.