ಇಲ್ಲಿನ ಜನರನ್ನು ಕೊಂದು ನೇತ್ರಾವತಿ ತಿರುಗಿಸುವುದು ಬೇಡ: ಪೂಜಾರಿ
ಮಂಗಳೂರು: 'ಎತ್ತಿನ ಹೊಳೆ ನೀರು ಯೋಜನೆ ಕೇವಲ ನೆಪ. ಇಲ್ಲಿಯ ಜನರನ್ನು ಕೊಂದು ನೇತ್ರಾವತಿ ನದಿ ತಿರುಗಿಸುವುದು ಬೇಡ. ಇಲ್ಲಿಂದ ಕೋಲಾರಕ್ಕೆ ನೀರು ಹೋಗುತ್ತದೆ ಎಂದು ಮೋಸ ಮಾಡುವುದು ಬೇಡ. ಶಂಕುಸ್ಥಾಪನೆಗೆ ನನ್ನ ತೀವ್ರ ವಿರೋಧ ಇದೆ' ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ಬೆಂಗಳೂರು ಕೆ.ಆರ್.ಪುರ ಎಲೆಮಲ್ಲಪ್ಪ ಕೆರೆಯಿಂದ ಕೋಲಾರಕ್ಕೆ ಕೇವಲ 32 ಕಿ.ಮೀ. ದೂರಕ್ಕೆ ನೀರು ಹಾಯಿಸುವ ಮೂಲಕ ಅಲ್ಲಿನ ಜನರಿಗೆ ನೀರುಣಿಬಹುದು. ಇದು ಕಡಿಮೆ ಖರ್ಚಿನ ಯೋಜನೆ, ಇದಕ್ಕೆ ಭೂಸ್ವಾಧೀನವೂ ಅವಶ್ಯಕತೆ ಇಲ್ಲ. ಕೋಲಾರ ಉಸ್ತುವಾರಿ ಸಚಿವ ಯು.ಟಿ.ಖಾದರ್ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದಾರೆ. ಇಂಥ ಯೋಜನೆಗಳಿಂದ ಮಾತ್ರ ಕೋಲಾರದ ಜನರಿಗೆ ನೀರು ಸಿಗಲಿದೆ. 10 ಸಾವಿರ ಕೋಟಿ ವೆಚ್ಚದಲ್ಲಿ ನೇತ್ರಾವತಿ ನದಿ ತಿರುವು ಮಾಡಿದರೂ ನೀರು ಅಲ್ಲಿಗೆ ಹೋಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಎಷ್ಟು ವರ್ಷಗಳು ತಗುಲುತ್ತದೆ ಎನ್ನಲು ಸಾಧ್ಯವಿಲ್ಲ. ಖರ್ಚು 20 ಸಾವಿರ ಕೋಟಿ ಆದರೂ ಆದೀತು. ಇಂಥ ಮೋಸದ ಭರವಸೆ ನೀಡುವುದು ನಿಲ್ಲಿಸಲಿ ಎಂದು ಪೂಜಾರಿ ಕಿಡಿ ಕಾರಿದರು.
ಅಧಿಕಾರ ಶಾಶ್ವತ ಅಲ್ಲ: ಮೂಲ್ಕಿ ನ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಾದ ಬಗ್ಗೆ ಪ್ರಶ್ನೆಗೆ ಪೂಜಾರಿ, ನಾನು ಪ್ರಚಾರಕ್ಕೆ ಅಲ್ಲಿಗೆ ಹೋಗಿಲ್ಲ ಎಂದರು. ನೇತ್ರಾವತಿ ನದಿ ತಿರುವು ಬಗ್ಗೆ ಖಡಾಖಂಡಿತ ವಿರೋಧ ಹಿಂದೆ ಎತ್ತಿನಹೊಳೆ ಪ್ರತಿಪಾದಕ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಟಿಕೆಟ್ ಸ್ಪರ್ಧೆ ಒಡ್ಡಿರುವುದು ಕಾರಣವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಅಧಿಕಾರ ಶಾಶ್ವತ ಅಲ್ಲ. ಇದಕ್ಕಾಗಿ ನಾನು ತತ್ವ ಬಿಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಅರುಣ್ ಕುವೆಲ್ಲೊ, ಹರಿಕೃಷ್ಣ ಬಂಟ್ವಾಳ್, ಟಿ.ಕೆ.ಸುಧೀರ್ ಇದ್ದರು.