ರೈಲಿಗೆ ಕಾಯುತ್ತಿದ್ದ ಯುವಕರಿಬ್ಬರ ಮೇಲೆ ತಂಡ ಹಲ್ಲೆ
ಪುತ್ತೂರು: ಹಾಸನಕ್ಕೆ ತೆರಳಲೆಂದು ರೇಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಯುವಕರಿಬ್ಬರ ಮೇಲೆ ಸುಮಾರು 20 ಮಂದಿಯ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗಾಯಾಳುಗಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಕನ್ಯಾನ ಕಣಿಯೂರು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಝರ್ (20) ಮತ್ತು ಕನ್ಯಾನ ನಿವಾಸಿ ಹಸನ್ ಎಂಬವರ ಪುತ್ರ ಸೈಯದ್ (20) ಗಾಯಗೊಂಡವರು. ಇವರಿಬ್ಬರು ಹಾಸನದಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಕನ್ಯಾನದಿಂದ ಪುತ್ತೂರಿನ ರೇಲ್ವೆ ನಿಲ್ದಾಣಕ್ಕೆ ಆಗಮಿಸಿ ರೈಲಿಗಾಗಿ ಕಾಯುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಸುಮಾರು 20 ಮಂದಿಯ ತಂಡ ಇವರ ಮೇಲೆ ಹಲ್ಲೆ ನಡೆಸಿ, ಸೈಯದ್ ಅವರ ತಲೆಯನ್ನು ರೈಲಿನ ಹಳಿಗೆ ಜಜ್ಜಿ ಗಾಯಗೊಳಿಸಿರುವುದಾಗಿ ಗಾಯಾಳುಗಳು ತಿಳಿಸಿದ್ದಾರೆ. ಹಲ್ಲೆ ನಡೆಸಿದವರ ಪರಿಚಯ ತಮಗಿಲ್ಲ ಎಂದೂ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.