ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮಂಗಳೂರು: ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆಗೆ ದಾಖಲಾಗಿದ್ದ ಯುವಕ ಕೆಎಸ್‌ರಾವ್ ರಸ್ತೆಯ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲತೀಶ (29) ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸರಿಯಾದ ಚಿಕಿತ್ಸೆ ಸಿಗದು ಎಂದು ಯೇನೆಪೋಯ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ರಾತ್ರಿ ಚುಚ್ಚುಮದ್ದು ನೀಡಿದ ಬಳಿಕ ವಿಚಿತ್ರವಾಗಿ ವರ್ತಿಸುತ್ತಿದ್ದ. ರಾತ್ರಿ 9.30ರ ವೇಳೆಗೆ ಐಸಿಯು ಕಿಟಕಿ ಗಾಜು ಪುಡಿ ಮಾಡಿದ್ದ. ರಾತ್ರಿ 12.30ಕ್ಕೆ ಆಸ್ಪತ್ರೆಯ 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಇದ್ದ ಕಾರಣ ಲತೀಶ್ ಆತ್ಮಹತ್ಯೆಗೆ ಕಾರಣ ಎಂದು ನಾರಾಯಣ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ವೃದ್ಧಾಶ್ರಮ ಹೆಸರಲ್ಲಿ ಧನಸಂಗ್ರಹ: ವ್ಯಕ್ತಿ ಪೊಲೀಸ್ ವಶಕ್ಕೆ
ವಿಟ್ಲ: ವೃದ್ಧಾಶ್ರಮ ಹೆಸರಲ್ಲಿ ಧನಸಂಗ್ರಹಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ವಶಕ್ಕೊಪ್ಪಿಸಿದ ಘಟನೆ ಬುಧವಾರ ನಡೆದಿದೆ. ಇಲ್ಲಿಗೆ ಸಮೀಪದ ಅಂಗ್ರಿಯ ಮೇಘಶ್ಯಾಮ ಎಂಬವರ ಮನೆಗೆ ಟ್ರಸ್ಟ್‌ವೊಂದರ ವೃದ್ಧಾಶ್ರಮ ಹೆಸರಲ್ಲಿ ಓರ್ವ ಆಗಮಿಸಿ ಧನಸಂಗ್ರಹ ಮಾಡಲೆತ್ನಿಸುತ್ತಿದ್ದ. ಸಂಶಯಗೊಂಡ ಅವರು ಟ್ರಸ್ಟ್ ಆಡಳಿತ ಮಂಡಳಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಅವರು ಹಣ ಸಂಗ್ರಹಕ್ಕಾಗಿ ಯಾರನ್ನೂ ನೇಮಿಸಿಲ್ಲ ಎಂದು ದೃಢಪಡಿಸಿದರು. ಬಳಿಕ ಮೇಘಶ್ಯಾಮ ಪೊಲೀಸರಿಗೆ ದೂರು ನೀಡಿ ಅಪರಿಚಿತ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಈ ವ್ಯಕ್ತಿ ಹಾಸನ ಮೂಲದಿಂದ ಬಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.