ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉದ್ಯೋಗವೇನೋ ಖಾತ್ರಿ... ಆದರೆ ಕೂಲಿ ಯಾವಾಗ?

Lingaraj Badiger
Updated On : 31 Jan 2014, 12:50 pm

ಬಂಟ್ವಾಳ: ಉದ್ಯೋಗ ಖಾತ್ರಿ.. ಆದರೆ ಕೂಲಿ ವಿಳಂಬ.. ಇದೇನಿದು...?
ಸುಮ್ನೆ ಗೊಂದಲ ಮಾಡ್ಕೋಬೇಡಿ.. ಇದು ಗಾಂಧಿ ಗ್ರಾಮ ಕೊಳ್ನಾಡುವಿನಲ್ಲಿ ಎದುರಾಗಿರುವ ಸಮಸ್ಯೆ. ಸಾಕ್ಷರತೆ, ಮುಂದುವರಿಕಾ ಶಿಕ್ಷಣ ಯೋಜನೆ, ಸ್ವಚ್ಛ ಗ್ರಾಮ ಯೋಜನೆ ಮೊದಲಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ ಉದ್ಯೋಗ ಖಾತ್ರಿಯಲ್ಲೂ ಕ್ರಾಂತಿ ಮಾಡಲು ಹೊರಟ ಇಲ್ಲಿನ ಗ್ರಾಮಸ್ಥರಿಗೆ ಎದುರಾಗಿರುವ ಸಮಸ್ಯೆಯಿದು...
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮನೆಗೊಂದು ಬಾವಿ ಎಂಬಂತೆ ಬಾವಿ ತೋಡಿದ್ದೇ ಬಂತು. ಆದರೆ ಕೂಲಿ ಮಾತ್ರ ಇನ್ನೂ ಬಂದಿಲ್ಲ. ಕೊಳ್ನಾಡು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಸ್ವಂತ ಜಮೀನಿನಲ್ಲಿ ಬಾವಿ ತೋಡಲು ಒಟ್ಟು 198 ಅರ್ಜಿ ಬಂದಿತ್ತು. ಪಂಚಾಯಿತಿ ನೀಡಿದ ಸೂಚನೆಯಂತೆ ಉದ್ಯೋಗ ಚೀಟಿ ಹೊಂದಿದವರೆಲ್ಲಾ ಬಾವಿ ಕೆಲಸ ಆರಂಭಿಸಿಯೇ ಬಿಟ್ಟರು. ಸುಮಾರು 22 ಬಾವಿಗಳ ಕೆಲಸ ಆರಂಭಗೊಂಡಿದ್ದು, ಈ ಪೈಕಿ ಬಹುತೇಕ ಬಾವಿಗಳಲ್ಲಿ ನೀರು ದೊರಕಿರುವ ಖುಷಿಯಲ್ಲಿಯೂ ಕೆಲಕುಟುಂಬಗಳಿವೆ. ಆದರೆ ಬಾವಿ ತೋಡಿ ಒಂದೂವರೆ ತಿಂಗಳಾದರೂ ಬರಬೇಕಾದ ಕೂಲಿ ಇನ್ನೂ ಕಾರ್ಮಿಕರ ಕೈ ಸೇರಿಲ್ಲ.
ಫಲಾನುಭವಿಗಳು ಈ ಬಗ್ಗೆ ಸ್ಥಳೀಯ ಪಂಚಾಯಿತಿಯಲ್ಲಿ ವಿಚಾರಿಸಿದರೆ, ತಾಂತ್ರಿಕ ಸಮಸ್ಯೆ ಎಂಬ ಉತ್ತರ ಸಿಗುತ್ತಿದೆ. ಕೊಳ್ನಾಡುವಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬಾವಿ ತೋಡಿರುವ ಕುಟುಂಬದ ಮಹಿಳೆಯೊಬ್ಬರು ಹೇಳುವಂತೆ, ಇವರ ಪತಿ ಹಾಗೂ ಇತರ ಏಳುಮಂದಿ 12 ದಿನಗಳ ಕಾಲ ನಿರಂತರ ದುಡಿದು ಬಾವಿ ತೋಡುವ ಕಾರ್ಯ ಮುಗಿಸಿದ್ದಾರೆ. ನಿರೀಕ್ಷೆಯಂತೆ ನೀರೂ ಸಿಕ್ಕಿದೆ, ಬಾವಿಗೆ ಕಟ್ಟೆ ಕಟ್ಟುವ, ರಿಂಗ್ ಹಾಕುವ ಕೆಲಸ ಮಡಬೇಕಿದೆ, ಆದರೆ ಸಿಗಬೇಕಾದ ಕೂಲಿ ಸಿಗದೆ ಸಮಸ್ಯೆಯಾಗಿದೆ. ಕೆಲಸದಲ್ಲಿ ತೊಡಗಿಸಿಕೊಂಡ ಇತರ ಕಾರ್ಮಿಕರಿಗೂ ನಾವೇ ಕೂಲಿ ಕೊಟ್ಟಿದ್ದೇವೆ. ನಮಗ್ಯಾವಾಗ.. ಸಿಗುತ್ತದೆಯೋ ಕಾದುನೋಡಬೇಕು ಎನ್ನುತ್ತಾರೆ.
ಎಷ್ಟು ಅನುದಾನ...? ದಕ್ಷಿಣ ಕನ್ನಡ ಜಿಪಂ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಕೊಡುವುದರ ಜೊತೆಗೆ ಮನೆಗೊಂದು ಬಾವಿ ನಿರ್ಮಾಣಗೊಳ್ಳಬೇಕು, ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸ್ವಂತ ಜಮೀನಿನಲ್ಲಿ ಬಾವಿ ನಿರ್ಮಾಣ ಮಾಡಲು ಉದ್ಯೋಗ ಖಾತ್ರಿಯಲ್ಲಿ ಅವಕಾಶ ಮಾಡಿಕೊಟ್ಟಿದೆ. ಅದರಂತೆ 1.8 ಮೀಟರ್ ವ್ಯಾಸದ 6 ಮೀಟರ್ ಆಳದ ಬಾವಿಗೆ ಸಾಮಗ್ರಿ ವೆಚ್ಚ, ಕೂಲಿ ವೆಚ್ಚ ಸೇರಿ 27 ಸಾವಿರ, 9 ಮೀಟರ್ ಆಳದ ಬಾವಿಗೆ 33 ಸಾವಿರ, 12 ಮೀಟರ್ ಆಳದ ಬಾವಿಗೆ 39 ಸಾವಿರ ಹಾಗೂ 15 ಮೀಟರ್ ಆಳದ ಬಾವಿಗೆ ಗರಿಷ್ಠ 46 ಸಾವಿರ ನೀಡುವುದಾಗಿ ಸುತ್ತೋಲೆಯಲ್ಲಿ ತಿಳಿಸಿದೆ.
ಅದರಂತೆ ಕೊಳ್ನಾಡು ಗ್ರಾಮದಲ್ಲಿ ಮನೆಗೊಂದು ಬಾವಿ ಎನ್ನುವಂತೆ ಹೊಸ ಕ್ರಾಂತಿ ಮಾಡಲು ಹೊರಟವರಿಗೆ ವೇತನ ಬಿಡುಗಡೆಯ ತಾಂತ್ರಿಕ ಸಮಸ್ಯೆಗಳು ತಲೆನೋವಾಗಿ ಪರಿಣಮಿಸಿದ್ದು, ಉತ್ಸಾಹವೆಲ್ಲಾ ಕುಗ್ಗುವ ಹಂತದಲ್ಲಿದೆ.
ಏನು ಸಮಸ್ಯೆ?: ಉದ್ಯೋಗ ಖಾತ್ರಿಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ, ಗ್ರಾಪಂನಿಂದ ಸರಿಯಾದ ಕಾಲಕ್ಕೆ ಹಾಜರಾತಿ ಪಟ್ಟಿ, ಪ್ರಗತಿ ವರದಿ ಸಲ್ಲಿಕೆಯಾಗುತ್ತಿದ್ದರೆ, ಇಲಾಖೆಯಿಂದ ಅನುದಾನ ಕಾಲಕಾಲಕ್ಕೆ ಬಿಡುಗಡೆಯಾಗುತ್ತದೆ. ಆದರೆ ಕೊಳ್ನಾಡುವಿನಲ್ಲಿ ಬಾವಿ ತೋಡುವ ಕಾರ್ಯದಲ್ಲಿ ತೊಡಗಿಸಿಕೊಂಡವರ ಹಾಜರಾತಿ ಪಟ್ಟಿಯನ್ನು ಗ್ರಾಪಂ ಸೂಕ್ತ ಸಮಯಕ್ಕೆ ಇಲಾಖೆಗೆ ಒದಗಿಸದಿರುವುದು ಹಾಗೂ ಜಿಪಂ ಎಜಿನಿಯರ್ ನೀಡಬೇಕಾದ ಪರಿಶೀಲನಾ ವರದಿಯ ವಿಳಂಬವೇ ವೇತನ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.  ಆದರೆ ಈ ಯಾವ ಸಮಸ್ಯೆಗಳೂ ಫಲಾನುಭವಿಗಳಿಗೆ ಮನದಟ್ಟಾಗುತ್ತಿಲ್ಲ. ನಮಗ್ಯಾಕೆ ಇನ್ನೂ ಕೂಲಿ ಕೊಟ್ಟಿಲ್ಲ ಎಂಬುದೊಂದೇ ಅವರ ಪ್ರಶ್ನೆ.

ಕೂಲಿ ವಿಳಂಬಕ್ಕೆ ಪರಿಹಾರ ಪಡಕೊಳ್ಳಬಹುದು
ಕೊಳ್ನಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೂಲಿ ವಿಳಂಬ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಲಿಖಿತ ಸೂಚನೆ ನೀಡಲಾಗಿದೆ. ಗ್ರಾಮಮಟ್ಟದಲ್ಲಿ ಅಧಿಕಾರಿಗಳ ಕರ್ತವ್ಯಲೋಪ ಇದಕ್ಕೆ ಕಾರಣ.  ಇಂತಹ ಲೋಪಗಳಿಂದ ಉದ್ಯೋಗ ಖಾತ್ರಿಯ ಯಶಸ್ಸಿನ ಓಟಕ್ಕೆ ತೊಂದರೆಯಾಗುತ್ತದೆ. ಅರ್ಹ ಫಲಾನುಭವಿಗಳು ವಿಳಂಬವಾದ ಕೂಲಿ ಸಹಿತ ಕೂಲಿ ವಿಳಂಬವಾದುದಕ್ಕೆ ಪರಿಹಾರ ಪಡೆಯಲೂಬಹುದು. ಇದಕ್ಕಾಗಿ ದೂರು ಸಲ್ಲಿಸಬೇಕಿದೆ. ನಿಗದಿತ ಅವಧಿಯಲ್ಲಿ ಕಾರ್ಮಿಕರಿಗೆ ಕೂಲಿ ಕೊಡಬೇಕೆಂದು ಕಾನೂನು ಹೇಳುತ್ತದೆ. ವಿಳಂಬವಾದರೆ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ದ.ಕ. ಜಿಲ್ಲೆ ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್‌ಮನ್ ಶೀನಶೆಟ್ಟಿ ಹೇಳುತ್ತಾರೆ.

ಕನಿಷ್ಠ 10 ಸಾವಿರ ಬಾವಿ ತೋಡುವ ಉದ್ದೇಶ
ಖಾತ್ರಿ ಯೋಜನೆಯಡಿ ಮುಂದಿನ ಮಾರ್ಚ್‌ನೊಳಗೆ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಬಾವಿ ನಿರ್ಮಾಣಗೊಳ್ಳಬೇಕೆಂದು ಉದ್ದೇಶಿಸಲಾಗಿದೆ. ಈಗಾಗಲೇ ಬಂಟ್ವಾಳ ತಾಲೂಕಿನ ಬಾಳೆಪುಣಿ, ಕೊಳ್ನಾಡು ಹಾಗೂ ಸಜಿಪಮೂಡ ಗ್ರಾಪಂನಲ್ಲಿ ಬಾವಿ ತೋಡುವ ನಿಟ್ಟಿನಲ್ಲಿ ನೂರಾರು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಮಾದರಿ ಗ್ರಾಮ ಎಂದೆನಿಸಿದ ಕೊಳ್ನಾಡುವಿನಲ್ಲೇ ಇಂತಹ ಸಮಸ್ಯೆ ಎದುರಾಗುತ್ತಿರುವುದು ಉದ್ಯೋಗ ಖಾತ್ರಿಯ ಒಟ್ಟು ಓಟಕ್ಕೇ ಹೊಡೆತ ಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಿದೆ.
-ಮೌನೇಶ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement