ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಏನು ಸ್ವಾಮಿ, ಪುರಸಭೆ ಮಾರ್ತೀರಾ?!

Lingaraj Badiger
Updated On : 31 Jan 2014, 12:50 pm

ಬಂಟ್ವಾಳ: ಏನು ಸ್ವಾಮೀ.. ಪುರಸಭೆಯನ್ನು ಮಾರ್ತೀರಾ? ಇಲ್ಲಾ ಏಲಂ ಮಾಡ್ತೀರಾ?
ಇದು ಬಂಟ್ವಾಳ ಪುರಸಭೆ ಆಡಳಿತ ಪಕ್ಷದ ಸದಸ್ಯರೊಬ್ಬರು, ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಕೇಳಿದ ಪ್ರಶ್ನೆ.
ಗುರುವಾರ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ಪ್ರಶ್ನೆ ಕೇಳಿಬಂದಿದ್ದು, ಕೆಲಕಾಲ ಸಭೆಯಲ್ಲಿ ಕೋಲಾಹಲದ ವಾತಾವರಣ ಉಂಟಾಯಿತು.
ಪುರಸಭೆಯ ಮಾಸಿಕ ಜಮಾಖರ್ಚಿನ ಕುರಿತ ಚರ್ಚೆ ವೇಳೆ ಕುಡಿಯುವ ನೀರಿಗಾಗಿ ಪಂಪ್ ದುರಸ್ತಿ, ವಿದ್ಯುತ್, ಪೈಪ್ ರಿಪೇರಿ ಹೀಗೆ ಪ್ರತಿ ತಿಂಗಳು ಲಕ್ಷಾಂತರ ವೆಚ್ಚವಾಗುತ್ತಿದೆ. ಆದರೆ ಆದಾಯ ಮಾತ್ರ ಕೆಲವೇ ಸಾವಿರ ಎಂದ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಯನ್ನು ಸದಸ್ಯ ಸದಾಶಿವ ಬಂಗೇರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿದ ಎಲ್ಲ ಸದಸ್ಯರು, ಅನಧಿಕೃತ ನಳ್ಳಿ ಸಂಪರ್ಕ, ನೀರಿನ ಬಿಲ್ ಬಾಕಿ ಇರಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪುರಸಭೆಗೆ ಸಿ.ಸಿ.ಕ್ಯಾಮೆರಾ: ಪುರಸಭೆಯ ಆಡಳಿತ ಪಕ್ಷದ ಸದಸ್ಯ ವಾಸು ಪೂಜಾರಿ ಬೇಡಿಕೆಯಂತೆ ಅಧ್ಯಕ್ಷರು, ಮುಖ್ಯಾಧಿಕಾರಿ ಸಹಿತ ಪುರಸಭೆಯ ಎಲ್ಲ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲು ಸಭೆ ತೀರ್ಮಾನ ಕೈಗೊಳ್ಳಲಾಯಿತು.
ಸಮಯ ತಿಂದ ತಂತಿಬೇಲಿ: ವಾರ್ಡ್ ನಂ. 4ರ ದೇವರಕಟ್ಟೆಯ ಬಸ್ ತಂಗುದಾಣ ಬಳಿ ಪುರಸಭೆಯ ಜಮೀನು ಅತಿಕ್ರಮಣ ಮಾಡದಂತೆ, ಕಳೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಇನ್ನೂ ಕೂಡ ತಂತಿಬೇಲಿ ಹಾಕದಿರುವುದು ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ಸ್ಥಳೀಯ ಸದಸ್ಯ ದೇವದಾಸ ಶೆಟ್ಟಿ, ಇನ್ನೂ ಕೂಡ ತಂತಿಬೇಲಿ ಹಾಕದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಹಳಷ್ಟು ಸಮಯದ ಬಳಿಕ, ತಂಗುದಾಣದಲ್ಲಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಲು ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳಲು ನಿರ್ಣಯಿಸಿ, ತಕ್ಷಣದಿಂದಲೇ ಜಾರಿಗೊಳಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಲಾಯಿತು.
ತ್ಯಾಜ್ಯ ಮುಗಿಯದ ವ್ಯಾಜ್ಯ: ಪ್ರತಿ ಬಾರಿಯಂತೆ ಈ ಬಾರಿಯೂ ಅಸಮರ್ಪಕ ತ್ಯಾಜ್ಯ ವಿಲೇವಾರಿ ಕುರಿತು ಚರ್ಚೆ ನಡೆಯಿತು. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ಸಹಿತ ಆರೋಗ್ಯಾಧಿಕಾರಿ, ಪೌರ ಕಾರ್ಮಿಕರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸದಸ್ಯರು ಸಭೆಯಲ್ಲಿ ದೂರಿದರು. ಗುತ್ತಿಗೆದಾರನಂತೂ ಕೈಗೂ ಸಿಗುತ್ತಿಲ್ಲ, ದೂರವಾಣಿ ಕರೆಗೂ ಸ್ಪಂದಿಸುತ್ತಿಲ್ಲ ಎಂದು ಸದಸ್ಯ ರಾಮಕೃಷ್ಣ ಆಳ್ವ ಆರೋಪಿಸಿದಾಗ ಎಲ್ಲ ಸದಸ್ಯರು ಧ್ವನಿಗೂಡಿಸಿದರಲ್ಲದೆ, ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ನೂತನ ಮುಖ್ಯಾಧಿಕಾರಿಯನ್ನು ಆಗ್ರಹಿಸಿದರು.
ಅಂಗವಿಕಲರ ವೈದ್ಯಕೀಯ ಶಿಬಿರ ನಡೆಸುವ ಕುರಿತಂತೆ ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಉಪಾಧ್ಯಕ್ಷೆ ಯಾಸ್ಮಿನ್, ಮುಖ್ಯಾಧಿಕಾರಿ ಗಣೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement