ಜಾಗ ನೀಡುವವರಿಗೆ ಆರು ಪಟ್ಟು ಹೆಚ್ಚಿನ ದರ: ಡಿಸಿ
ಮಂಗಳೂರು: ಪೈಪ್ಲೈನ್ಗೆ ಭೂಮಿ ನೀಡುವವರಿಗೆ ಭೂಮಿಯ ಮಾರ್ಗದರ್ಶಿ ದರವನ್ನು ಇದೇ ಮೊದಲ ಬಾರಿಗೆ ಆರು ಪಟ್ಟು ಹೆಚ್ಚಿಸಿ ನೀಡಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ಯಾಸ್ ಪೈಪ್ಲೈನ್ಗೆ ಭೂಸ್ವಾಧೀನ ಕುರಿತು ಸ್ಥಳೀಯರ ಸಭೆ ನಡೆಸಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರು.
ಹಾಸನದಲ್ಲಿ ಭೂಮಾರ್ಗದರ್ಶಿ ಮೌಲ್ಯವನ್ನು ನಾಲ್ಕು ಪಟ್ಟು ವೃದ್ಧಿಸಿ ಪರಿಹಾರ ನೀಡಲು ನಿರ್ಧರಿಸಿದ್ದಾರೆ. ಇಲ್ಲಿನ ಭೂಹಿಡುವಳಿ ಗಮನಿಸಿ ಮಂಗಳೂರು ತಾಲೂಕಿನಲ್ಲಿ ಆರು ಪಟ್ಟು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಐದು ಪಟ್ಟು ಭೂಮೌಲ್ಯ ಹೆಚ್ಚಿಸಲಾಗುವುದು. ಹಾಗಾಗಿ ಭೂಮಿ ನೀಡುವವರಿಗೆ ಹೆಚ್ಚು ಪರಿಹಾರ ಲಭ್ಯವಾಗಲಿದೆ ಎಂದರು.
1962ರ ಪೆಟ್ರೋಲಿಯಂ ಮತ್ತು ಖನಿಜ ಸಾಗಾಟ ಪೈಪ್ಲೈನ್ ಕಾಯ್ದೆಯನ್ವಯ ಪೂರ್ತಿ ಭೂಮಿ ಖರೀದಿಸಿ ಪರಿಹಾರ ನೀಡುವಂತಿಲ್ಲ. ಹಾಗಾಗಿ ಭೂಮೌಲ್ಯದ ಶೇ.10 ಮಾತ್ರವೇ ಪರಿಹಾರ ನೀಡಲು ಸಾಧ್ಯ. 2014 ಜ.1ರಿಂದ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದಿದ್ದು, ಮುಂದೆ ಪೈಪ್ಲೈನ್ ಕಾಯ್ದೆಯಲ್ಲೂ ಬದಲಾವಣೆ ಬರಬಹುದು ಎಂದರು. 2002ರಲ್ಲಿ ಪೈಪ್ಲೈನ್ಗೆ ಪರಿಹಾರ ಬಾಕಿ ಇರುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಆಳ ಬೇರು ಹೋಗದ ಮರಗಳನ್ನು ಬಿಟ್ಟು ಉಳಿದ ಅಡಕೆ, ತೆಂಗು, ಭತ್ತ ಇತ್ಯಾದಿ ಬೆಳೆಗಳನ್ನು ಪೈಪ್ಲೈನ್ ಹಾದುಹೋಗುವ ಮೇಲಿನ ಜಾಗದಲ್ಲಿ ನೆಡುವುದಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಲಿಖಿತವಾಗಿ ಜನರಿಗೆ ನೀಡುತ್ತೇವೆ. ಅಲ್ಲದೆ ಪರಿಸರ ಅಧ್ಯಯನ ವರದಿಯ ಉಚಿತ ಪ್ರತಿ ನೀಡಲಾಗುವುದು ಎಂದರು.