ಜುಗಾರಿ: 8 ಮಂದಿ ಬಂಧನ
ಪುತ್ತೂರು: ನೇತ್ರಾವತಿ ನದಿ ತಟದ ಬಿಳಿಯೂರು ಗ್ರಾಮದ ಬೊಳ್ಳಾರು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಗುರುವಾರ ದಾಳಿ ನಡೆಸಿದ ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಆಟದಲ್ಲಿ ನಿರತರಾಗಿದ್ದ ಪಂಚಾಯಿತಿ ಸದಸ್ಯ ಸಹಿತ 8 ಮಂದಿಯನ್ನು ಬಂಧಿಸಿ, ರು. 13,340 ಮತ್ತು 7 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ನಡೆಸಿದ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಟಿ. ಬಶೀರ್ ಅಹಮದ್ ಮತ್ತು ಪೊಲೀಸರ ತಂಡ ಆಟದಲ್ಲಿ ನಿರತರಾಗಿದ್ದ ಎಂಟು ಮಂದಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಟಿ. ಬಶೀರ್ ಅಹಮದ್, ಪೊಬೆಷನರಿ ಡಿವೈಎಸ್ಪಿ ಸಜಿತ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರಿಗೆ ಹಸ್ತಾಂತರಿಲಾಗಿದೆ.
ಮನೆಗಳಿಗೆ ಹಗಲೇ ಕನ್ನ; ನಗ, ನಗದು ಕಳವು
ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಹಾಡಹಗಲೇ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಸುಮಾರು 25 ಪವನ್ ಚಿನ್ನ ಹಾಗೂ 10 ಸಾವಿರ ನಗದು ಕದ್ದೊಯ್ದಿರುವ ಘಟನೆ ಬುಧವಾರ ನಡೆದಿದೆ.
ಗೂನಡ್ಕದ ಯಶೋದಾ ಟೀಚರ್ ಎಂಬವರ ಮನೆ ಹಾಗೂ ಪಕ್ಕದಲ್ಲಿರುವ ಮಾಧವ ಮಾಸ್ಟರ್ ಮನೆಯ ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಸಂಜೆ ವೇಳೆ ಶಿಕ್ಷಕರು ವಾಪಸ್ ಮನೆಗೆ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಶ್ವಾನದಳ ಕರೆಸಿ ತನಿಖೆ ಆರಂಭಿಸಿದ್ದಾರೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಇಲ್ಲಿನ ಬೈಕಾಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಶ್ರೀನಿವಾಸ ನಾಯಕ್ (55) ಮೃತರು. ಇವರು ಮಾನಸಿಕ ಕಾಯಿಲೆಯಿಂದ ಬಳಲುತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಇವರನ್ನು ಉಡುಪಿ ಟಿ.ಎಂ.ಎ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ರವಿಚಂದ್ರ ನಾಯಕ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪರಿಚಿತ ಶವ ಪತ್ತೆ
ಮಲ್ಪೆ: ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಯ ಕಡಲ ಕಿನಾರೆಯ ಹೊಯಿಗೆ ರಾಶಿಯಲ್ಲಿ ಸುಮಾರು 50- 60 ವರ್ಷ ಪ್ರಾಯದ ಗಂಡಸಿನ ಮೃತ ದೇಹವು ಅಂಗಾತನೆ ಬಿದ್ದು ಕೊಂಡಿದ್ದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಮೃತನು ಮೀನುಗಾರಿಕೆಯ ಸಮಯ ಯಾವುದೋ ಅವಘಡಕ್ಕೀಡಾಗಿ ಸಮುದ್ರದಲ್ಲಿ ಬಿದ್ದು ಮೃತಪಟ್ಟಿರಬಹುದು ಎಂಬುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಾವಿರಾರು ರು. ಮೌಲ್ಯದ ಅಡಕೆ ಕಳವು
ಕಾರ್ಕಳ: ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ಜನಾರ್ದನ ಎಂಬವರು ತಮ್ಮ ತೋಟದಲ್ಲಿನ ದಾಸ್ತಾನು ಕೋಣೆಯಲ್ಲಿ ಸುಲಿದ ಅಡಕೆಯನ್ನು ತುಂಬಿಸಿಟ್ಟಿದ್ದನ್ನು ಕಳ್ಳರು ಕಳವು ಮಾಡಿಕೊಂಡ ಹೋಗಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಕಳವು ಮಾಡಿದ ಅಡಕೆಯ ಒಟ್ಟು ಮೌಲ್ಯ ರು. 23,000 ಎಂಬುದಾಗಿ ಜನಾರ್ದನ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.