ಪಾರೆಂಕಿ ಶ್ರೀ ಮಹಿಷಮರ್ಧಿನಿ ಸನ್ನಿಧಿ ಬ್ರಹ್ಮಕಲಶೋತ್ಸವ
ಬೆಳ್ತಂಗಡಿ: ಪುರಾತನ ಶಕ್ತಿಪೀಠವೆಂದು ಆರಾಧಿಸಲ್ಪಡುತ್ತಿರುವ ಸುಮಾರು 9 ನೇ ಶತಮಾನದಲ್ಲಿಯೇ ಪ್ರತಿಷ್ಠಾಪನೆಯಾದ ಪಾರೆಂಕಿ ಶ್ರೀ ಮಹಿಷಮರ್ದಿನಿ ಸನ್ನಿಧಿಯಲ್ಲಿ ಈಗ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂಭ್ರಮ.
ಇದೀಗ ಅನ್ನಛತ್ರ, ಸಭಾಭವನ ಮೊದಲಾದ ಸುಮಾರು ರು. 1.20 ಕೋಟಿ ವೆಚ್ಚದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜ.31 ರಿಂದ ಫೆ.4 ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಂದರ್ಭ ಶ್ರೀದೇವಿಗೆ ಅರ್ಪಿಸಲು ತಯಾರಿ ನಡೆದಿದೆ.
ಶುಕ್ರವಾರ ಸಂಜೆ ದೇಗುಲದಲ್ಲಿ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ವಾಸ್ತುಪೂಜೆ, ವಾಸ್ತುಬಲಿ, ವಾಸ್ತುಹೋಮಗಳು ನಡೆದು ಶ್ರೀದೇವಿ ಸಪ್ತಶತಿ ಪಾರಾಯಣ ಪ್ರಾರಂಭಗೊಂಡಿತು. ಶನಿವಾರ ಬೆಳಗ್ಗೆ 7ಕ್ಕೆ ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಯಾಗ, ಕ್ಷಾಲನಾದಿ ಸಪ್ತಬಿಂಬ ಶುದ್ಧಿ ಪ್ರಕ್ರಿಯಾ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಪಾರೆಂಕಿ, ಕುಕ್ಕಳ, ಮಾಲಾಡಿ, ಸೋಣಂದರೂ, ಮಚ್ಚಿನ ಮತ್ತು ಬಡಗಕಜೆಕಾರು ಗ್ರಾಮಗಳ ಗ್ರಾಮಸ್ಥರಿಂದ, ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ದೇವಿ ಸನ್ನಿಧಿಗೆ ಹೊರೆ ಕಾಣಿಕೆ ಸಮರ್ಪಣೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ಅನ್ನಛತ್ರ ಉದ್ಘಾಟನೆ: 10.30ಕ್ಕೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ರಾಜೇಶ್ವರಿ ಬಿ.ಜೋಶಿ ಅನ್ನಛತ್ರ ಉದ್ಘಾಟಿಸುವರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಲಿದ್ದರು, ಸಂಸದ ನಳಿನ್ಕುಮಾರ್ ಕಟೀಲು, ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ, ಮಾಜಿ ಶಾಸಕ ಪ್ರಭಾಕರ ಬಂಗೇರ, ಹಿಂದುಳಿದ ವರ್ಗಗಳ ಆಯೋಗ ಸದಸ್ಯ ತುಂಗಪ್ಪ ಬಂಗೇರ ಅತಿಥಿಗಳಾಗಿರುತ್ತಾರೆ.
ರಾತ್ರಿ 8.30ರಿಂದ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಜಾದೂ ಪ್ರದರ್ಶನ ನಡೆಯಲಿದೆ.