ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಸೀದಿಗಳ ಆಡಳಿತ ಸಮಿತಿಯಲ್ಲಿ ಭಿನ್ನಾಭಿಪ್ರಾಯ, ಉದ್ವಿಗ್ನ

Vishwanath S
Updated On : 1 Feb 2014, 11:10 am

ಬಂಟ್ವಾಳ: ಶುಕ್ರವಾರದ ವಿಶೇಷ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೊಡುವ ಪರ ಹಾಗೂ ವಿರೋಧದ ವಿಚಾರದಲ್ಲಿ ಎರಡು ಮಸೀದಿಗಳ ಆಡಳಿತ ಸಮಿತಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯ ಉದ್ವಿಗ್ನ ಸ್ಥಿತಿಗೆ ಕಾರಣವಾದ ಘಟನೆ ಶುಕ್ರವಾರ ಪಾಣೆಮಂಗಳೂರು ಸಮೀಪದ ನೆಹರೂನಗರದಲ್ಲಿ ನಡೆದಿದೆ.
ಇಲ್ಲಿನ ನೆಹರೂನಗರದ ಮಸೀದಿ ಹಾಗೂ ಅಕ್ಕರಂಗಡಿ ಕೇಂದ್ರ ಜುಮ್ಮಾ ಮಸೀದಿಯವರ ಭಿನ್ನಾಭಿಪ್ರಾಯದಿಂದ ಈ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.  ಪಾಣೆಮಂಗಳೂರಿನ ಅಕ್ಕರಂಗಡಿ ಮಸೀದಿಯವರು ನೆಹರೂ ನಗರದ  ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಲಿಖಿತ ಅನುಮತಿ ನೀಡಿಲ್ಲ, ಜಮಾತೆಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಸಲು ಅನುಮತಿ ನೀಡುವಂತೆ 3 ವಾರಗಳ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈವರೆಗೆ ಲಿಖಿತ ಅನುಮತಿ ದೊರಕದ ಕಾರಣ ಪ್ರಾರ್ಥನೆಗೆ ಅಡಚಣೆಯಾಗಿದೆ. ಅನುಮತಿ ನೀಡದ ಹೊರತು ನೆಹರೂ ನಗರದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇಲ್ಲವಾಗಿದೆ.
 ಸುಮಾರು 35 ವರ್ಷಗಳಷ್ಟು ಹಳೆಯದಾದ ನೆಹರೂ ನಗರ ಮಸೀದಿಯನ್ನು ನವೀಕರಣಗೊಳಿಸಲಾಗಿದ್ದು, ಪ್ರಾರ್ಥನೆ ಸಲ್ಲಿಸಲು ಲಿಖಿತ ಅನುಮತಿ ದೊರೆಯುವ ಭರವಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಸೀದಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅಕ್ಕರಂಗಡಿ ಮಸೀದಿಯಿಂದ ಅನುಮತಿ ದೊರಕದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ನವೀಕೃತ ಮಸೀದಿಯವರು ಪ್ರಾರ್ಥನೆ ನಡೆಸಿಯೇ ಸಿದ್ಧ ಎಂದು ಮಸೀದಿ ಮುಂದೆ ಜಮಾಯಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ಅಲ್ಲದೆ ತಮಗೆ ಭದ್ರತೆ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು. ಈ ನಡುವೆ ಪ್ರಾರ್ಥನೆ ನಡೆಸಲು ನವೀಕೃತ ಮಸೀದಿಗೆ ಅನುಮತಿ ನೀಡದಂತೆ ಅಕ್ಕರಂಗಡಿ ಮಸೀದಿಯವರು ನಗರ ಠಾಣೆಗೆ ದೂರು ನೀಡಿದ್ದರು.  ಈ ವಿವಾದ ಹಾಗೂ ಲಿಖಿತ ಅನುಮತಿ ದೊರಕದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭ ರದ್ದಾಯಿತು.
ನೂತನ ಮಸೀದಿಯಲ್ಲಿ ಪ್ರಾರ್ಥನೆಗೆ ಪೊಲೀಸರೂ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ಥಳೀಯವಾದ ಖಾಸಗಿ ಜಮೀನಿನಲ್ಲಿ ನೂರಕ್ಕೂ ಅಧಿಕ ಮುಸಲ್ಮಾನರು ಶುಕ್ರವಾರದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement