ಅಕ್ಕಿ ಸಹಿತ 200ಕ್ಕೂ ಮಿಕ್ಕಿ ಸಾವಯವ ಆಹಾರ ಪ್ರದರ್ಶನ
ಬೆಳ್ತಂಗಡಿ: 15ಕ್ಕೂ ಮಿಗಿಲಾದ ದೇಸಿ ಅಕ್ಕಿ ತಳಿಗಳು... 7ಕ್ಕೂ ಮಿಗಿಲಾದ ಸಿರಿ ಧಾನ್ಯಗಳು... 100 ಕ್ಕೂ ಮಿಗಿಲಾದ ಸಾವಯವ ದವಸ ಧಾನ್ಯಗಳು... 6ಕ್ಕೂ ಮಿಗಿಲಾದ ಸಾವಯವ ಹಣ್ಣಿನ ಪಾನೀಯಗಳು, ಗವ್ಯ ಉತ್ಪನ್ನಗಳು, ದೇಸೀ ತರಕಾರಿ ಬೀಜಗಳು, ಕೃಷಿ ಉತ್ಪನ್ನಗಳು, 200ಕ್ಕೂ ಮಿಗಿಲಾದ ವಿಷರಹಿತ ವಿವಿಧ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉಜಿರೆಯಲ್ಲಿ ಮೇಳೈಸಿದೆ.
ಶುಕ್ರವಾರದಿಂದ ಸೋಮವಾರದವರೆಗೆ ಉಜಿರೆಯ ಶಾರದಾ ಮಂಟಪದಲ್ಲಿ ದೇಸಿ ಉತ್ಥಾನ ಅಸೋಸಿಯೇಟ್ಸ್ ಮಂಗಳೂರು, ಜೆ.ಸಿ.ಐ.ಉಜಿರೆ ಹಾಗೂ ಶಾರದಾ ಸೇವಾ ಟ್ರಸ್ಟ್ ಉಜಿರೆ ಇವರು ಸಾವಯವ ಆಹಾರ ಉತ್ಪನ್ನಗಳನ್ನು ಸಾಲಾಗಿ ಜೋಡಿಸಿ ಸಾವಯವದ ಮಹತ್ವ ವಿವರಿಸುತ್ತಿದ್ದಾರೆ.
ಆರೋಗ್ಯ ಏರುಪೇರು: ಇಂದು ಮನುಷ್ಯನ ಆರೋಗ್ಯ ಏರುಪೇರಾಗುತ್ತಿರುವುದು ತಾನು ತಿನ್ನುವ ಆಹಾರದಿಂದ ಎಂದು ಸಾಬೀತಾಗಿದೆ. ದಿನನಿತ್ಯದ ಆಹಾರ ಕಡಿಮೆಯಾಗಿ ಔಷಧಿಯನ್ನು ಹೆಚ್ಚಾಗಿ ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನೈಸರ್ಗಿಕ ಆಹಾರದತ್ತ ಮತ್ತೊಮ್ಮೆ ಮಾನವ ಗಮನ ಹರಿಸಬೇಕು ಎಂಬ ಉದ್ದೇಶದಿಂದ ಇಂತಹ ಪ್ರದರ್ಶನ ಅಲ್ಲಲ್ಲಿ ಏರ್ಪಡಿಸುತ್ತಿದ್ದೇವೆ ಎಂದು ದೇಸಿ ಉತ್ಥಾನ ಅಸೋಷಿಯೇಟ್ ಕಾರ್ಯನಿರ್ವಾಹಕ ನಿರ್ದೇಶಕ ರಾಮಕೃಷ್ಣ ಭಟ್ ಮೈರುಗ ಹೇಳುತ್ತಾರೆ.
20ಕ್ಕೂ ಮಿಕ್ಕಿ ಅಕ್ಕಿ ತಳಿ: ಸಾವಯವ ದವಸ ಧಾನ್ಯಗಳಿಗೆ ಪರಿಮಳ, ರುಚಿಯಿದೆ, ಚೆನ್ನಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಪುಷ್ಠಿ ನೀಡುತ್ತದೆ. ಮಧುಮೇಹದ ಉಪಶಮನಕ್ಕೆ ಡಯಾನಾ ಅಕ್ಕಿ, ನರ ದೌರ್ಬಲ್ಯ ಹಾಗೂ ಸಂಧಿನೋವು ಉಪಶಮನಕ್ಕಾಗಿ ನವರ ಅಕ್ಕಿ, ಮೈಸೂರು ಮಹಾರಾಜರು ಉಪಯೋಗಿಸುತ್ತಿದ್ದ 2 ದಿವಸದವರೆಗೆ ಕೆಡದ ಅನ್ನದ ಅಕ್ಕಿ, ಬಾಣಂತಿಯರಿಗೆ ಶ್ರೇಷ್ಠವಾದ ಕರಿಗಜವಿಲಿ ಅಕ್ಕಿ, ಮಕ್ಕಳಿಗೆ ಉತ್ತಮವಾದ ರತ್ನಚೂಡಿ ಅಕ್ಕಿ, ವೃದ್ಧರಿಗೆ, ಮಕ್ಕಳಿಗೆ ಉತ್ತಮವಾದ ಸಣ್ಣ ವಾಳ್ಯ ಅಕ್ಕಿ, ಪಲಾವ್, ಕೇಸರಿಬಾತ್ಗೆ ಉತ್ತಮವಾದ ಗಂಧಸಾಲೆ ಅಕ್ಕಿ, ಗಮ್ಸಾಲೆ ಅಕ್ಕಿ, ಬಾಸುಮತಿ ಅಕ್ಕಿ, ಪಾಯಸಕ್ಕೆ ಉಪಯೋಗವಾಗುವ ಬರ್ಮಾ ಬ್ಲ್ಯಾಕ್, ಗೋವಿಂದ ಭೋಗ್ ಹಾಗೂ ಹೇಮಾವತಿ, ಮುಗದಸಿರಿ, ಕೆಂಪಕ್ಕಿ, ಸೋನಾಮಸೂರಿ ಮೊದಲಾದ 20ಕ್ಕೂ ಮಿಗಿಲಾದ ಅಕ್ಕಿ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಹೊಸನಗರ ಶ್ರೀರಾಮಚಂದ್ರಪುರ ಮಠದ ಗವ್ಯ ಉತ್ಪನ್ನಗಳು ವಿಶೇಷವಾದ ಶುದ್ಧ ದ್ರವ ರೂಪದ ಅರಿಷಿಣ ಲಭ್ಯವಿದೆ.
6ಕ್ಕೂ ಮಿಗಿಲಾದ ಗ್ರೀನ್ ಟೀ ಪೌಡರ್, 10 ಕ್ಕೂ ಮಿಗಿಲಾದ ವಿಶೇಷ ಆಹಾರೋತ್ಪನ್ನಗಳು, 7 ಕ್ಕೂ ಮಿಗಿಲಾದ ಸಿಹಿ ಪದಾರ್ಥಗಳು (ಬೆಲ್ಲ, ಸಕ್ಕರೆ), 10 ಕ್ಕೂ ಮಿಗಿಲಾದ ಮೌಲ್ಯವರ್ಧಿತ ಆಹಾರೋತ್ಪನ್ನಗಳು, 10ಕ್ಕೂ ಮಿಗಿಲಾದ ಸುಗಂಧ ಚಿಕಿತ್ಸೆಯಲ್ಲಿ ಉಪಯೋಗಿಸುವ ತೈಲಗಳು, ದೇಸಿ ತರಕಾರಿ ಬೀಜಗಳು ಸೇರಿ ಒಟ್ಟಾರೆಯಾಗಿ 200 ಕ್ಕೂ ಮಿಗಿಲಾದ ವಿಷರಹಿತ ಆಹಾರ ಉತ್ಪನ್ನಗಳನ್ನು ಇಲ್ಲಿ ನೋಡಬಹುದಾಗಿದೆ.
ಪ್ರದರ್ಶನವನ್ನು ಶ್ರೀ ಧ.ಮ.ಶಿ.ಸಂ.ಗಳ ಕಾರ್ಯದರ್ಶಿ ಬಿ.ಯಶೋವರ್ಮ ಶುಕ್ರವಾರ ಉದ್ಘಾಟಿಸಿದರು.
ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ನೆಟ್ನಾಯ, ಜಿಸಿಐ ಉಜಿರೆ ಅಧ್ಯಕ್ಷ ಜೆ.ಸಿ.ಸಂದೇಶ್ ಇದ್ದರು.