ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ

Mainashree
Updated On : 5 Jul 2014, 10:37 am

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ. ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಕುಳಿತುಕೊಳ್ಳಲೂ ಸ್ಥಳವಿಲ್ಲ. ಕೊರಗರಿಗೆ ಎಲ್ಲಿಯೂ ಸೂಕ್ತ ನ್ಯಾಯ ಸಿಗುತ್ತಿಲ್ಲ, ಆಸ್ಪತ್ರೆಗೆ ಔಷಧಿಗೆ ಹೋದರೆ ಅಲ್ಲೂ ನಾವು ನಿಂತೇ ಇರಬೇಕಾ...
ಹೀಂಗೆಂದು ಅಧಿಕಾರಿಗಳಲ್ಲಿ ಪ್ರಶ್ನಿಸಿದವರು ಬುಡಕಟ್ಟು ಕೊರಗ ಸಮುದಾಯದ ಮಹಿಳೆ ಕುಸುಮಾ.
ಕೊರಗರ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತ ಸಭೆ ಶುಕ್ರವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆಯಿತು.
ತಾಪಂ ಇಒ ವಿಜಯ ಗೌಡ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕೊರಗ ಸಮುದಾಯದ ಮಹಿಳೆಯರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಕುಸುಮಾ, ಸರ್ಕಾರಿ ಆಸ್ಪತ್ರೆಯಲ್ಲಿ ಬಡ ಕೊರಗ ಸಮುದಾಯದ ಮಹಿಳೆಯರನ್ನು ಸರಿಯಾಗಿ ಗಮನಿಸುತ್ತಿಲ್ಲ, ನಮಗೆ ಎಲ್ಲಿಯೂ ಸರಿಯಾದ ನ್ಯಾಯ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ಕಾನಿಂಗ್ ಇಲ್ಲದ ಕಾರಣ ಬಡವರಾದ ನಮಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಪುತ್ತೂರಿನ ಖಾಸಗಿ ಆಸ್ಪತ್ರೆಯಾದ ಸಿಟಿ ಆಸ್ಪತ್ರೆಯಲ್ಲಿ ಕೊರಗರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ನರಿಮೊಗರು ನಿವಾಸಿ ಸೇಸಮ್ಮ ಮಾತನಾಡಿ ತಮ್ಮ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಎಲ್ಲ ತಯಾರಿ ನಡೆಸಲಾಗಿದ್ದರೂ ಪಂಚಾಯತ್‌ನಿಂದ ಎನ್‌ಒಸಿ ನೀಡುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ತಾಪಂ ಇಒ ಈ ಬಗ್ಗೆ ಗ್ರಾಪಂಗೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಕಾವು ಮಾಡ್ನೂರಿನಲ್ಲಿ 65 ಕೊರಗರ ಮನೆಯಿದ್ದು, ಅಲ್ಲಿ ಸ್ಮಶಾನ ನಿರ್ಮಿಸಬೇಕು ಎಂದು ಇಲ್ಲಿನ ಕಾಲೋನಿ  ನಿವಾಸಿಗಳು ಆಗ್ರಹಿಸಿದರು. ಈ ಕುರಿತು ಪರಿಶೀಲನೆ ಮಾಡುವುದಾಗಿ ತಹಸೀಲ್ದಾರ್ ಎಂ.ಟಿ. ಕುಳ್ಳೇ ಗೌಡ ತಿಳಿಸಿದರು.
ತಹಸೀಲ್ದಾರ್ ಮಾತನಾಡಿ, ಕೊರಗರ ಅಭಿವೃದ್ಧಿಗಾಗಿ ಸರ್ಕಾರ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಶಿಕ್ಷಣದ ಕೊರತೆ ಮತ್ತು ಭಾಷಾ ಸಮಸ್ಯೆಗಳಿಂದಾಗಿ ಯೋಜನೆಯ ಮಾಹಿತಿ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ಗ್ರಾಪಂ ಕಚೇರಿಗಳಿಗೆ ತೆರಳಿ ಯೋಜನೆ, ಸವಲತ್ತುಗಳನ್ನು ಕೇಳಿ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಮೆಸ್ಕಾಂ ಸಹಾಯಕ ಅಭಿಯಂತರ ಲೋಹಿತ್, ಪುರಸಭಾ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಹಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement