ಯುನಾನಿ ಚಿಕಿತ್ಸಾ ಕೇಂದ್ರ ಪುನಾರಂಭ
ಮಂಗಳೂರು: 2 ವರ್ಷಗಳ ಹಿಂದೆ ಮುಚ್ಚಿಹೋಗಿದ್ದ ಬಂದರು ಅಜಿಜುದ್ದೀನ್ ರಸ್ತೆಯಲ್ಲಿರುವ ಆಯುಷ್ ಇಲಾಖೆಯ ಯುನಾನಿ ಚಿಕಿತ್ಸಾ ಕೇಂದ್ರಕ್ಕೆ ಶುಕ್ರವಾರ ಮರು ಚಾಲನೆ ನೀಡಲಾಯಿತು.
ಮಹಾನಗರ ಪಾಲಿಕೆ ಉಸ್ತುವಾರಿಯಲ್ಲಿ ನಡೆಯುವ ಈ ಕೇಂದ್ರವನ್ನು ಮೇಯರ್ ಮಹಾಬಲ ಮಾರ್ಲ ಉದ್ಘಾಟಿಸಿದರು. ಯುನಾನಿ ಪದ್ಧತಿಯಲ್ಲಿ ಇಲ್ಲಿ ಎಲ್ಲರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಉಪಯೋಗವನ್ನು ಪಡೆಯುವಂತೆ ತಿಳಿಸಿದರು.
ವಾರದಲ್ಲಿ 5 ದಿನ: ಸೋಮವಾರ, ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ 5 ದಿನ ಇಲ್ಲಿ ಚಿಕಿತ್ಸಾ ಸೌಲಭ್ಯವಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 12.30, ಸಂಜೆ 3ರಿಂದ 5ರವರೆಗೆ ಭೇಟಿ ನೀಡಬಹುದು. ಕರೆಕಾಡು ಆಯುಷ್ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ ಮತ್ತು ಕಸಬಾ ಬೆಂಗರೆ ಕೇಂದ್ರದ ವೈದ್ಯಾಧಿಕಾರಿ ಡಾ.ಮಹಮ್ಮದ್ ಅಶ್ಬಕ್ ಭೇಟಿ ನೀಡುತ್ತಾರೆ. ಇಲ್ಲಿಗೆ ಪೂರ್ಣಕಾಲಿಕ ವೈದ್ಯರು, ದಾದಿಯರ ನೇಮಕ ಮಾಡಲಾಗುವುದು ಎಂದು ಆಯುಷ್ ಇಲಾಖೆ ಉಪನಿರ್ದೇಶಕ ಡಾ.ಸದಾಶಿವ ತಿಳಿಸಿದರು.
ಯುನಾನಿ ಚಿಕಿತ್ಸೆ ಹೇಗೆ?: ಯುನಾನಿ ಚಿಕಿತ್ಸೆ ಔಷಧ ರಹಿತವಾದ್ದು. ರೋಗ ಗುಣಪಡಿಸುವುದಲ್ಲದೆ, ರೋಗವನ್ನು ತಡೆಯುತ್ತದೆ. ಚೇತೋಹಾರಿ ಚಿಕಿತ್ಸೆಯಾಗಿ ಇದು ಪ್ರಸಿದ್ಧಿ. ಡಯಾಬಿಟಿಸ್, ಪ್ಯಾರಲಿಸೀಸ್, ಕೀಲು ನೋವು, ಸಂಧಿವಾತ, ಮುಟ್ಟಿನ ತೊಂದರೆಯಿಂದ ಬರುವ ಬೆನ್ನು ನೋವು ಶಮನ, ಅಂಗಾಂಗ ಹಾಗೂ ಮಾಂಸ ಖಂಡ ಬಲಪಡಿಸುವುದು, ದೇಹಕ್ಕೆ ಉಪಯೋಗವಲ್ಲದ ವಸ್ತುಗಳನ್ನು ಹೊರಹಾಕಲು ಹಿಚಾಮ ಚಿಕಿತ್ಸೆ ಉಪಯೋಗಕಾರಿ. ಅಂಗಮರ್ಧನ, ಶಾರೀರಿಕ ವ್ಯಾಯಾಮ, ಶಾಖ ಚಿಕಿತ್ಸೆ ನೀಡಲಾಗುತ್ತದೆ.
80 ವರ್ಷ ಇತಿಹಾಸದ ಈ ಕೇಂದ್ರಕ್ಕೆ ಹೆಚ್ಚಾಗಿ ಕಾರ್ಮಿಕರು ಆಗಮಿಸುತ್ತಿದ್ದಾರೆ. ಯುನಾನಿ ಚಿಕಿತ್ಸೆ ಬಳಿಕ ಆಯುರ್ವೇದ ಚಿಕಿತ್ಸೆಯೂ ನಡೆಯುತ್ತಿತ್ತು. ಆ ಬಳಿಕ ವೈದ್ಯರಿಲ್ಲದೆ ಕೇಂದ್ರ 2 ವರ್ಷ ಮುಚ್ಚಿತ್ತು.
ಪಾಲಿಕೆ ಸದಸ್ಯರಾದ ರಮೀಜಾ ಭಾನು, ಅಬ್ದುಲ್ ಅಜೀಜ್, ಅಶೋಕ್ ಶೆಟ್ಟಿ, ಪೂರ್ಣಿಮಾ, ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಇದ್ದರು.