ಎಲ್ಪಿಜಿ ಅನಿಲ ಯೋಜನೆ: ಸಂತ್ರಸ್ತರ ಬಳಿಗೆ ಡಿಸಿ ನಾಳೆ
ಮಂಗಳೂರು: ಮಂಗಳೂರು-ಹಾಸನ-ಸೋಲೂರು ಮಾರ್ಗದಲ್ಲಿ ಎಲ್ಪಿಜಿ ಯೋಜನೆಗೆ ಬೆಳ್ತಂಗಡಿಯ ನೆರಿಯಾದಲ್ಲಿ ಪಂಪ್ಹೌಸ್ ನಿರ್ಮಾಣಕ್ಕೆ ಭೂಸ್ವಾಧೀನ ಆಗಬೇಕು. ಇದಕ್ಕೆ ರೈತರು ಜಮೀನು ಬಿಟ್ಟುಕೊಡಲು ನಿರಾಕರಿಸುತ್ತಿರುವುದರಿಂದ ಸ್ವಯಂ ಜಿಲ್ಲಾಧಿಕಾರಿಯೇ ಜು.8ರಂದು ಸ್ಥಳ ಪರಿಶೀಲನೆ ಮಾಡಿ ನಿರ್ಣಯ ಕೈಗೊಳ್ಳಲಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಈಗಾಗಲೇ ಪೆಟ್ರೋನೆಟ್ ಕಂಪನಿ ಅಳವಡಿಸಿದ ಡೀಸೆಲ್ ಹಾಗೂ ಪೆಟ್ರೋಲ್ ಕೊಳವೆ ಮಾರ್ಗದಲ್ಲಿ ಯಾರೋ ಕಿಡಿಗೇಡಿಗಳು ರಂಧ್ರ ಕೊರೆದ ಪರಿಣಾಮ ಡೀಸೆಲ್ ಸೋರಿಕೆಯಾಗುತ್ತಿದೆ. ಆದ್ದರಿಂದ ಕೂಡಲೇ ಸೋರಿಕೆ ತಡೆಗಟ್ಟುವಂತೆ ರೈತರು ಆಗ್ರಹಿಸಿದರು. ಈ ಬಗ್ಗೆ ಕೂಡಲೇ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಎಚ್ಪಿಸಿಎಲ್ ಕಂಪನಿ ಮುಖ್ಯ ವ್ಯವಸ್ಥಾಪಕ ಮುರಳೀಧರ್ ಸೂಚಿಸಿದರು ಜಿಲ್ಲಾಧಿಕಾರಿ.
ಒಟ್ಟು 397 ಕಿ.ಮೀ. ಉದ್ದದ ಎಲ್ಪಿಜಿ ಪೈಪ್ಲೈನ್ ಮಾರ್ಗದಿಂದ ಅನೇಕ ಪ್ರಯೋಜನ ಆಗಲಿದೆ. ಇದರಿಂದ ಸುರಕ್ಷಿತ ಮತ್ತು ವಿಶ್ವಾಸನೀಯ ಸಾರಿಗೆ ವಿಧಾನ ಆರ್ಥಿಕವಾಗಿ ಲಾಭದಾಯಕವಾಗಲಿದೆ. ಸಂಚಾರ ದಟ್ಟಣೆಯಲ್ಲಿ ಇಳಿಮುಖ, ನೈಸರ್ಗಿಕ ವಿಪತ್ತುಗಳಲ್ಲಿ ಅತ್ಯಂತ ಕಡಿಮೆ ಪರಿಣಾಮ ಆಗಲಿದೆ ಎಂದು ಮುರಳೀಧರ್ ಹೇಳಿದರು.
ಈಗ ಮಂಗಳೂರಿನಿಂದ ಎಲ್ಪಿಜಿ ಅನಿಲ 3500 ಟ್ಯಾಂಕರ್ ಮೂಲಕ ದಕ್ಷಿಣ ಭಾರತದ ವಿವಿಧ ಕೇಂದ್ರಗಳಿಗೆ ಪೂರೈಕೆಯಾಗುತ್ತಿದೆ. ಸುಮಾರು 150 ಟ್ಯಾಂಕರ್ಗಳು ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಗಳಲ್ಲಿ ಸಂಚರಿಸುತ್ತವೆ. ಇದರಿಂದ ಆಗಾಗ ಟ್ಯಾಂಕರ್ ಅಪಘಾತಗಳಾಗುತ್ತಿದ್ದು, ಕಳೆದ 3 ವರ್ಷದಲ್ಲಿ 109 ಟ್ಯಾಂಕರ್ಗಳು ಅಪಘಾತವಾಗಿವೆ ಎಂದು ಮುರಳೀಧರ್ ಮಾಹಿತಿ ನೀಡಿದರು.
ಜಿಲ್ಲಾ ಎಸ್ಪಿ ಡಾ.ಶರಣಪ್ಪ, ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಇತರೆ ಅಧಿಕಾರಿಗಳು, ಬೆಳ್ತಂಗಡಿ ಹಾಗೂ ಹಾಸನ ಜಿಲ್ಲೆಯ ರೈತ ಮುಖಂಡರು ಸಭೆಯಲ್ಲಿದ್ದರು.