ಮನೆಗೆ ಅಂಗನವಾಡಿ, ಮನೆ ಮಂದಿಗೆ ಜೋಪಡಿ
ಮಂಗಳೂರು: ಬೆಳ್ತಂಗಡಿಯ ಕೊರಗರ ಕಾಲನಿಯ ಮನೆಯಲ್ಲಿ ಅಂಗನವಾಡಿ ನಡೆಯುತ್ತಿದ್ದು, ಮನೆ ಮಂದಿ ಹೊರಗೆ ಜೋಪಡಿಯಲ್ಲಿ ವಾಸಿಸುವಂತಾಗಿದೆ. ಈ ಬಗ್ಗೆ ಸಂಬಂಧಿತ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡ ಶೇಖರ್ ದೂರಿದ್ದಾರೆ.
ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಭಾನುವಾರ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಕಂದಾಯ ಅಧಿಕಾರಿ ಮತ್ತು ಸಂಬಂಧಿತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿ 10 ದಿನದಲ್ಲಿ ವರದಿ ನೀಡುವಂತೆ ವೇಣೂರು ಠಾಣಾಧಿಕಾರಿಗೆ ಎಸ್ಪಿ ಸೂಚಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಅಪರಾಧ ಪ್ರಕರಣ ಜಾಸ್ತಿಯಾಗುತ್ತಿದೆ. ಆದ್ದರಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಶೇಖರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ವಿಶ್ವಸಂಸ್ಥೆ ಪ್ರಕಾರ 1 ಲಕ್ಷ ಜನಸಂಖ್ಯೆಗೆ 120 ಪೊಲೀಸರು ಇರಬೇಕು. ಆದರೆ ಅಷ್ಟು ಸಿಬ್ಬಂದಿ ಇಲ್ಲ. ಮಂಜೂರಾತಿ ಪ್ರಮಾಣ ಕಡಿಮೆ ಇದೆ. ಇದನ್ನು ಜಾಸ್ತಿ ಮಾಡಲು ಪ್ರಯತ್ನಿಸಲಾಗುತ್ತಿದ್ದು, ಗೃಹರಕ್ಷಕದಳದವರೂ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ನುಡಿದರು.
ಪೂರ್ಣ ಠಾಣೆ: ಧರ್ಮಸ್ಥಳಕ್ಕೆ ಪೂರ್ಣಪ್ರಮಾಣದ ಪೊಲೀಸ್ ಠಾಣೆ ಮತ್ತು ಬಂಟ್ವಾಳದಲ್ಲಿ ಸಂಚಾರಿ ಠಾಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಕಲ್ಲಿನ ಕ್ವಾರಿಗಳಲ್ಲಿ ನೀರು ತುಂಬಿದ್ದು, ಜೀವಕ್ಕೆ ಅಪಾಯ ಕಾದಿದೆ. ಈ ಕ್ವಾರಿಗಳ ಬಳಿಯೇ ಅಂಗನವಾಡಿ, ಕಾಲು ದಾರಿಗಳಿವೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶೇಖರ್ ಒತ್ತಾಯಿಸಿದರು. ಜಿಲ್ಲಾಡಳಿತ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಗುಂಡಿ ಮುಚ್ಚಲು ಆದೇಶಿಸಿದೆ. ಗುಂಡಿ ಮುಚ್ಚದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಎಸ್ಪಿ ತಿಳಿಸಿದರು.
ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ತಮಿಳರಿಗೆ ಎಸ್ಸಿ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದ ನಿಜವಾದ ದಲಿತರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ದಲಿತ ಸಂಘಟನೆಗಳ ವಿರೋಧವಿದೆ. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ದಲಿತ ಮುಖಂಡ ಆನಂದ ಒತ್ತಾಯಿಸಿದರು. ಹೆಚ್ಚುವರಿ ಎಸ್ಪಿ ಶಿವಕುಮಾರ್ ಇದ್ದರು.