ಜೋಡುಕಟ್ಟೆ ರಸ್ತೆ ದುರವಸ್ಥೆ
ಕಾರ್ಕಳ: ರೆಂಜಾಳ-ಕಾರ್ಕಳ ಕೊಂಡಿಯಾಗಿರುವ ಜೋಡುಕಟ್ಟೆ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಮೌನವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಳೆದ ಹಲವು ವರ್ಷಗಳಿಂದ ಈ ರಸ್ತೆ ಹೊಂಡಮಯವಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರೂ, ಪ್ಯಾಚ್ವರ್ಕ್ ಸಮಪರ್ಕ ಕಾರ್ಯ ಇನ್ನೂ ನಡೆದಿಲ್ಲ.
ಕಳೆದ ಎರಡು ವರ್ಷಗಳ ಹಿಂದೆ ಹಾಕಲಾಗಿದ್ದ ಪ್ಯಾಚ್ವರ್ಕ್ ಕೆಲವೇ ತಿಂಗಳಲ್ಲಿ ಡಾಂಬರು ಕಿತ್ತು ಹೋಗಿ ಮತ್ತಷ್ಟು ಹೊಂಡಗಳು ಕಾಣಿಸಿಕೊಂಡಿದ್ದು ಅಪಘಾತಕ್ಕೂ ಕಾರಣವಾಗುತ್ತಿದೆ ಎಂದು ಇಲ್ಲಿನ ನಾಗರಿಕರು ದೂರಿದ್ದಾರೆ.
ಬಸ್ ಸಂಚಾರ ಮೊಟಕು: ರೆಂಜಾಳದಿಂದ ಕಾರ್ಕಳ ಮಾರ್ಗವಾಗಿ ಹಲವು ಬಸ್ಗಳು ಈ ಹಿಂದೆ ಸಂಚರಿಸುತ್ತಿದ್ದು, ಈ ರಸ್ತೆ ಅವ್ಯವಸ್ಥೆಯಿಂದ ಇದೀಗ ಕೆಲವೇ ಬಸ್ಗಳು ಸಂಚರಿಸುತ್ತಿವೆ.
ಮುಖ್ಯವಾಗಿ ರಸ್ತೆ ಅವ್ಯವಸ್ಥೆಯ ವಾಹನ ಸಂಚರಿಸಲು ಮಾಲೀಕರು ಹಿಂದೇಟು ಹಾಕುವಂತಾಗಿದ್ದು, ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಮುನ್ನ ರಸ್ತೆ ಡಾಂಬರೀಕರಣದ ಬಗ್ಗೆ ಭರವಸೆ ನೀಡಿದ ಜನಪ್ರತಿನಿಧಿಗಳು ಇದೀಗ ಮೌನವಹಿಸಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.