ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಿಕ್ಷಾ ಮುಖಾಮುಖಿ: ಮಹಿಳೆ ಗಂಭೀರ

Mainashree
Updated On : 11 Jul 2014, 10:00 am

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಂದಾರು ಎಂಬಲ್ಲಿ ರಿಕ್ಷಾಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೊಗ್ರು ಗ್ರಾಮದ ಮುಗೇರಡ್ಕ ನಿವಾಸಿ ಲಿಂಗಪ್ಪ ಗೌಡ ಎಂಬವರ ಪತ್ನಿ ಗೀತಾ (36) ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡಿತರ ಸಾಮಗ್ರಿ ಪಡೆದು ಹಿಂತಿರುಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಡೆದಾಡಿದ ಬಸ್ ನಿರ್ವಾಹಕರು
ಮೂಲ್ಕಿ: ಬಸ್ ಸಮಯ ನಿರ್ವಹಣೆ ವಿಚಾರದಲ್ಲಿ ಎರಡು ಖಾಸಗಿ ಬಸ್ಗಳ ನಿರ್ವಾಹಕರ ನಡುವೆ ಮಾತಿನ ಚಕಮಕಿ, ಹಲ್ಲೆ ನಡೆದ ಘಟನೆ ಗುರುವಾರ ಬೆಳಗ್ಗೆ ಮೂಲ್ಕಿ ಬಸ್ ನಿಲ್ದಾಣದಲ್ಲಿ ನಡೆಯಿತು. ಮಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ವೊಂದು ಇಲ್ಲಿನ ನಿಲ್ದಾಣಕ್ಕೆ ಆಗಮಿಸಿದಾಗ ಅದೇ ಸಮಯಕ್ಕೆ ಇನ್ನೊಂದು ಖಾಸಗಿ ಬಸ್ ಬಂತು. ಈ ವೇಳೆ ಸಮಯ ನಿರ್ವಹಣೆ ವಿಚಾರದಲ್ಲಿ ಎರಡೂ ಬಸ್ಗಳ ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಲ್ಲೆಯೂ ನಡೆಯಿತು. ಬಳಿಕ ಸ್ಥಳೀಯ ರಿಕ್ಷಾ ಚಾಲಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಮೂಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಬಸ್ಗಳನ್ನು ವಶಕ್ಕೆ ತೆಗೆದುಕೊಂಡರು. ಇದರಿಂದಾಗಿ ಬೆಳಗ್ಗಿನ ಅವಧಿಯಲ್ಲಿ ಕೆಲಸಕ್ಕೆ ಹೋಗುವ ಪ್ರಯಾಣಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.
ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಪುತ್ತೂರು: ತಿಂಗಳ ಹಿಂದೆ ಕೊಯಿಲ ಸಮೀಪ ಮಹಿಳೆಯ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಜಿ.ಪಂ. ಸದಸ್ಯನ ಸಹಿತ ನಾಲ್ವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ. ಜೂ.19ರಂದು ಚಂದಪ್ಪ ನಾಯ್ಕ ಎಂಬವರ ಪತ್ನಿ ಜಾನಕಿ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಮಾನಭಂಗಕ್ಕೆ ಯತ್ನ ನಡೆಸಿ ಜೀವ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಜಿ.ಪಂ. ಸದಸ್ಯ ಬಾಲಕೃಷ್ಣ ಸುವರ್ಣ, ಸ್ಥಳೀಯರಾದ ರಾಮ ನಾಯ್ಕ್, ಲಕ್ಷ್ಮೀನಾರಾಯಣ ಮತ್ತು ಉಮೇಶ್ ಗೌಡ ಎಂಬವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಗಾಂಜಾ ಮಾರಾಟ: ಇಬ್ಬರ ಬಂಧನ
ಪುತ್ತೂರು: ಗಾಂಜಾ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರನ್ನು ಮುಕ್ರುಂಪಾಡಿ ಎಂಬಲ್ಲಿ ಬೀರಮಲೆ ಬೆಟ್ಟದ ಬಳಿ ಬಂಧಿಸಲಾಗಿದೆ. ಕೆಮ್ಮಿಂಜೆ ಗ್ರಾಮದ ಮುಕ್ರುಂಪಾಡಿ ನಿವಾಸಿ ತಾರಾನಾಥ (20) ಮತ್ತು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅರವಿಂದ (20) ಬಂಧಿತರು. ಆರೋಪಿಗಳಿಬ್ಬರು ಬೀರಮಲೆ ಬೆಟ್ಟದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರ ಠಾಣೆ ಎಸ್ಐ ಅಬ್ದುಲ್ ಖಾದರ್ ಮತ್ತು ತಹಸೀಲ್ದಾರ್ ಎಂ.ಟಿ. ಕುಳ್ಳೇಗೌಡ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿತು. ಅವರಿಂದ ಒಂದು ಬೈಕ್ ಮತ್ತು ಪ್ಯಾಕೆಟ್ ರೂಪದಲ್ಲಿದ್ದ 300 ಗ್ರಾಂ. ಗಾಂಜಾ ಹುಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಪರಾಧ ಪತ್ತೆ ವಿಭಾಗದ ಎಸ್ಐ ಐತ್ತಪ್ಪ, ಎಎಸ್ಐಗಳಾದ ಮಾಧವ ಗೌಡ, ರಾಮ ನಾಯ್ಕ, ಸಿಬ್ಬಂದಿ ಉದಯ ಕುಮಾರ್, ಮೋಹನ್, ನಾರಾಯಣ, ರಾಧಾಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಿರುಪತಿಗೆ   
ಪುತ್ತೂರು: ತನ್ನ ಕುಟುಂಬಸ್ಥರೊಂದಿಗೆ ತಿರುಪತಿ ಯಾತ್ರೆಗೆ ತೆರಳಿದ್ದ ಪುತ್ತೂರು ನಗರದ ಕಲ್ಲಾರೆ ನಿವಾಸಿಯೊಬ್ಬರು ತಿರುಪತಿಯಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಕಲ್ಲಾರೆ ನಿವಾಸಿ, ಪತ್ರಕರ್ತ ಕುಮಾರ್ ಎಂಬವರ ತಂದೆ ನಾಗೇಶ್ (73) ನಾಪತ್ತೆಯಾದವರು. ಕುಟುಂಬದ ಮುಡಿಪು ಸಲ್ಲಿಸಲು ಸುಮಾರು 49 ಮಂದಿಯಿದ್ದ ನಾಗೇಶ್ ಅವರ ಕುಟುಂಬ ಜು.5ರಂದು ಪುತ್ತೂರಿನಿಂದ ತಿರುಪತಿಗೆ ತೆರಳಿದ್ದರು. ಹರಕೆ ತೀರಿಸಿ ತಿರುಪತಿಯಿಂದ ಊರಿಗೆ ಹಿಂತಿರುಗುತ್ತಿದ್ದ ವೇಳೆ ನಾಗೇಶ್ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ತಿರುಪತಿ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದವರು ಪತ್ತೆ
ಮೂಲ್ಕಿ: ಮೂರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ವ್ಯಕ್ತಿ ಮತ್ತು ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯನ್ನು ಕಾಟಿಪಳ್ಳದಲ್ಲಿ ಪೊಲೀಸರು ಪತ್ತೆ ಹಚ್ಚಿ, ಠಾಣೆಗೆ ಕರೆತಂದು ಮುಚ್ಚಳಿಕೆ ಬರೆಸಿ ಇಬ್ಬರನ್ನು ಅವರವರ ಮನೆಗೆ ಕಳುಹಿಸಲಾಗಿದೆ. ವಾರದ ಹಿಂದೆ ಮೂಲ್ಕಿ ಸಮೀಪದ ಗೇರುಕಟ್ಟೆಯ ವನಭೋಜನ ಎಂಬಲ್ಲಿಯ ಭೋಜ ಶೆಟ್ಟಿಗಾರ (42) ತಮ್ಮ ಮೂವರು ಮಕ್ಕಳಾದ ದೀಕ್ಷಾ(12), ಶರಣ (11) ಮತ್ತು ನಿರೀಕ್ಷಾ (6) ರೊಂದಿಗೆ ನಾಪತ್ತೆಯಾಗಿದ್ದು, ಭೋಜ ಶೆಟ್ಟಿಗಾರನ ಪತ್ನಿ ವೀಣಾ ಪೊಲೀಸರಿಗೆ ದೂರು ನೀಡಿದ್ದರು. ಇನ್ನೊಂದು ಪ್ರಕರಣದಲ್ಲಿ ವನಭೋಜನ ನಿವಾಸಿ ಕುಸುಮ ಶೆಟ್ಟಿಗಾರ (31) ಎಂಬಾಕೆ ತಮ್ಮ ಎರಡುವರೆ ವರ್ಷದ ಮಗಳು ರಕ್ಷಿತಾಳೊಂದಿಗೆ ನಾಪತ್ತೆಯಾಗಿದ್ದು, ಆಕೆಯ ಪತಿ ಗೋಪಾಲಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು. ಭೋಜ ಶೆಟ್ಟಿಗಾರ ಮತ್ತು ಕುಸುಮ ಇಬ್ಬರೂ ನೆರಹೊರೆಯವರಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದರಿಂದ ತಮ್ಮ ಮಕ್ಕಳೊಂದಿಗೆ ಮನೆ ಬಿಟ್ಟು ತೆರಳಿದ ಇವರು ಕಾಟಿಪಳ್ಳ ಐದನೇ ಬ್ಲಾಕ್ನಲ್ಲಿ ಬಾಡಿಗೆ ಕೋಣೆಯಲ್ಲಿ ಕಳೆದ ಒಂದು ವಾರದಿಂದ ವಾಸಿಸುತ್ತಿದ್ದರು. ಕೋಣಾಜೆ ಪದ್ಮಶಾಲಿ ಸಮಾಜ ಸೇವಾ ಸಂಘದ ಕಮಲಾಕ್ಷ, ಹರೀಶ, ಯೋಗೀಶ ಎಂಬವರು ಇವರ ಹೊಸ ಮೊಬೈಲ್ ನಂಬರ್ ಪತ್ತೆ ಹಚ್ಚಿ, ಕಾಟಿಪಳ್ಳದಲ್ಲಿ ವಾಸವಿರುವ ವಿಚಾರ ತಿಳಿದು ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆತಂದಿದ್ದು, ಪ್ರಕರಣ ಭೇದಿಸಲು ಪೊಲೀಸರಿಗೆ ಸಹಕರಿಸಿದರು.
ಜೀವನದಲ್ಲಿ ಜಿಗುಪ್ಸೆ; ವ್ಯಕ್ತಿ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಮೂಡುಅಲೆವೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ನಿವಾಸಿ, ಕಾಯಿಲೆಯಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಪ್ರಭಾಕರ ಭಂಡಾರಿ ಮೃತರು. ಅವರು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಔಷಧಿ ಮಾಡಿದ್ದರೂ ಗುಣಮುಖವಾಗಿರಲಿಲ್ಲ, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ಮಧ್ಯಾಹ್ನ 12 ಗಂಟೆಗೆ ಮನೆಯ ಸೀಲಿಂಗ್ಫ್ಯಾನ್ಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement