ಪ್ರತಿ'ವರ್ಷ'ವೂ ತಪ್ಪದ ಕುಮಾರಧಾರಾ ಸೇತುವೆ ಮುಳುಗಡೆ ರು. 6 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಕಾಮಗಾರಿ
ಸುಬ್ರಹ್ಮಣ್ಯ: ಮಳೆಗಾಲ ಬಂತೆಂದರೆ ಸಾಕು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಲಿಡುವ ಹೆಬ್ಬಾಗಿಲಲ್ಲೇ ಸಮಸ್ಯೆ ತಲೆದೋರುತ್ತದೆ. ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರಾ ಸೇತುವೆ ಪ್ರತಿ ವರ್ಷ ಮುಳುಗಡೆಯಾಗುವುದರಿಂದ ಜನಜೀವನ ಅಸ್ಯವ್ಯಸ್ತಗೊಳ್ಳುತ್ತವೆ.
ಕುಮಾರಧಾರಾ ನದಿ ಸೇತುವೆ ಮೇಲ್ದರ್ಜೆಗೇರಿಸುವಂತೆ ಹಲವಾರು ವರ್ಷಗಳ ಬೇಡಿಕೆ ಈಡೇರಿಕೆಯಾಗಿ ರು. 6 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯೂ ಮಳೆಗಾಲದಲ್ಲೂ ಸಮಸ್ಯೆ ತಲೆದೋರಿದೆ.
ದೇವಳದ ಆದಾಯಕ್ಕೂ ಹೊಡೆತ: ಯಾತ್ರಾರ್ಥಿಗಳಿಗೆ ಮಾತ್ರವಲ್ಲದೆ ಕ್ಷೇತ್ರಕ್ಕೆ ನಿತ್ಯ ಕೆಲಸಕ್ಕೆಂದು ಆಗಮಿಸುವ ನೌಕರರು, ಕಾರ್ಮಿಕರೂ, ಉದ್ಯೋಗಿಗಳು, ಶಾಲೆ- ಕಾಲೇಜು ವಿದ್ಯಾರ್ಥಿಗಳಿಗೂ ಕುಮಾರಧಾರಾ ಸೇತುವೆ ಮುಳುಗಡೆಯಿಂದ ತೊಂದರೆ ತಪ್ಪಿದ್ದಲ್ಲ. ಯಾತ್ರಾರ್ಥಿಗಳ ಸಂಖ್ಯೆಯೂ ಇಳಿಕೆಯಾಗುವುದರಿಂದ ಕ್ಷೇತ್ರದಲ್ಲಿ ನಡೆಯುವ ಸೇವೆಗಳಲ್ಲೂ ಭಾರಿ ಇಳಿಕೆಯಾಗಿ ಶ್ರೀಮಂತ ದೇಗುಲವೆನಿಸಿದ ಕುಕ್ಕೆ ದೇವಸ್ಥಾನದ ಆದಾಯಕ್ಕೂ ಹೊಡೆತ ಬೀಳುತ್ತದೆ.
ಈ ಬಾರಿ ಆರಂಭದಿಂದಲೇ ಮಳೆ ಕ್ಷೀಣ ಹಿನ್ನಲೆಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಜನ ಸಂಖ್ಯೆ ಅಧಿಕವಾಗಿತ್ತು.
ನಿತ್ಯ ಜನಜಂಗುಳಿಯಿಂದ ಕ್ಷೇತ್ರ ತುಂಬಿತ್ತು.ಇದೀಗ ಮತ್ತೆ ಮುಳುಗಡೆ ಸುದ್ದಿಯಾಗುತಿದ್ದಂತೆ ಭೇಟಿ ಕೊಡುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗುವ ಸಾಧ್ಯತೆ ಹೆಚ್ಚು.
ಪರ್ಯಾಯ ದಾರಿಯೂ ಕೈಕೊಡುತ್ತದೆ: ಕುಮಾರಧಾರಾ ಸೇತುವೆ ಮುಳುಗಡೆಯಾದಾಗ ಪರ್ಯಾಯ ದಾರಿಗಳನ್ನು ಬಳಸುವುದು ಅನಿವಾರ್ಯ. ಇದು ಸುತ್ತಿಬಳಸುವ ದಾರಿಯಾಗುತ್ತದೆ. ಸುಬ್ರಹ್ಮಣ್ಯ- ಏನೆಕಲ್ಲು-ಬಳ್ಪ-ಪಂಜ-ಪುಳಿಕುಕ್ಕು ಮಾರ್ಗವಾಗಿ ಕಡಬ- ಗುಂಡ್ಯ ಸಂಪರ್ಕ, ಸುಬ್ರಹ್ಮಣ್ಯ-ಪಂಜ- ಕಾಣಿಯೂರು ಮಾಗವಾಗಿ ಪುತ್ತೂರು ಅಥವಾ ಬೆಳ್ಳಾರೆ ಮಾರ್ಗವಾಗಿ ಪುತ್ತೂರು- ಸುಳ್ಯಕ್ಕೆ ಸಂಪರ್ಕ ಸಾಧಿಸಬಹುದು.
ಸುಬ್ರಹ್ಮಣ್ಯ-ಗುತ್ತಿಗಾರು-ಎಲಿಮಲೆ-ಮರ್ಕಂಜ-ಸಂಪಾಜೆ-ಮಡಿಕೇರಿಗೆ ಅಥವಾ ಸುಬ್ರಹ್ಮಣ್ಯ-ಗುತ್ತಿಗಾರು-ಪೈಚಾರು-ಸುಳ್ಯ-ಮಡಿಕೇರಿ-ಮೈಸೂರು-ಬೆಂಗಳೂರು ಮಾರ್ಗವಾಗಿ ಸುತ್ತು ಬಳಸಿ ತೆರಳಬಹುದು. ಆದರೆ ನಿರಂತರ ಮಳೆಯಾಗುವುದರಿಂದ ಈ ಪರ್ಯಾಯ ದಾರಿ ಮಧ್ಯೆ ಇರುವ ಹಳ್ಳಕೊಳ್ಳಗಳು, ಕಿರುಸೇತುವೆಗಳೂ ಮುಳುಗಡೆಯಾಗುವುದರಿಂದ ಇಲ್ಲಿಯೂ ತೊಂದರೆ ತಪ್ಪಿದ್ದಲ್ಲ.