ಪ್ರೌಢಶಾಲೆ ಸಹಶಿಕ್ಷಕರ ಸಂಘದ ಚುನಾವಣೆ:8 ನಾಮಪತ್ರ ಸಲ್ಲಿಕೆ
ಸೋಮವಾರಪೇಟೆ: ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆ 20ರಂದು ನಡೆಯಲಿದ್ದು, ತಾಲೂಕಿನಲ್ಲಿ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯ ಮೂರು ತಾಲೂಕು ಘಟಕಗಳಿಗೂ ನಡೆಯುವ ಚುನಾವಣೆಗೆ ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಪದಾಧಿಕಾರಿಗಳ 8 ಸ್ಥಾನಕ್ಕೆ ಶುಕ್ರವಾರ 8 ಮಂದಿ ತಮ್ಮ ಉಮೇದುವಾರಿಕೆ ನಾಮಪತ್ರ ಸಲ್ಲಿಸಿದ್ದಾರೆ.
ಸಂಘದ ನಿರ್ಗಮಿತ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ, ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ದಯಾನಂದ ಪ್ರಕಾಶ್ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ, ಸಂಘದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಿ.ಪಿ. ಧರ್ಮಪ್ಪ ಕಿರಗಂದೂರು ಸರ್ಕಾರಿ ಪ್ರೌಢಶಾಲೆ, ಎಸ್.ನಾಗರಾಜ್ ನಂಜರಾಯಪಟ್ಟಣ ಪ್ರೌಢಶಾಲೆ, ಎ.ಸಿ. ಮಂಜುನಾಥ್ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಎನ್. ದಿನೇಶ್ ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆ, ಯಶವಂತ್ ಕುಮಾರ್ ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ರತ್ನಕುಮಾರ್ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಇವರುಗಳು ತಾಲೂಕು ಚುನಾವಣಾಧಿಕಾರಿ ಇಲ್ಲಿನ ಸ.ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಿ.ಎಸ್. ಶಿವಣ್ಣ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಜು. 14 ಕೊನೆ ದಿನವಾಗಿದ್ದು, ಜು.15 ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದೆ.
ಸಂಘಕ್ಕೆ 8 ಮಂದಿ ಪದಾಧಿಕಾರಿಗಳ ಆಯ್ಕೆ ನಂತರ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಂದ 5 ಮಂದಿಯನ್ನು ನಾಮ ನಿರ್ದೇಶನ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಾಲೂಕಿನಿಂದ ಆಯ್ಕೆಯಾಗುವ ಪದಾಧಿಕಾರಿಗಳನ್ನು ನಿಯಮಾನುಸಾರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಸಂಘದ ಜಿಲ್ಲಾ ಚುನಾವಣಾಧಿಕಾರಿ ರಾಮಸ್ವಾಮಿಗೌಡ ತಿಳಿಸಿದ್ದಾರೆ.