ಬಂಟ್ವಾಳ: ಧಾರಾಕಾರ ಮಳೆಗೆ ಹಲವೆಡೆ ಗುಡ್ಡ ಕುಸಿತ
ಬಂಟ್ವಾಳ: ತಾಲೂಕಿನ ಹಲವೆಡೆ ಶನಿವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಗುಡ್ಡ ಕುಸಿತ ಉಂಟಾಗಿದೆ.
ಬಂಟ್ವಾಳದ ಮಂಡಾಡಿಯ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಬಳಿಯಲ್ಲಿ ಗುಡ್ಡ ಕುಸಿದು ಮಣ್ಣು ಹಾಗೂ ಮರ ರಸ್ತೆಗೆ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ ಸ್ಥಳಕ್ಕಾಗಮಿಸಿ ಜೆಸಿಬಿ ಮೂಲಕ ರಸ್ತೆಗೆ ಬಿದ್ದಿದ್ದ ಮಣ್ಣು ಹಾಗೂ ಮರದ ಗೆಲ್ಲುಗಳನ್ನು ತೆರವುಗೊಳಿಸಲು ಸಹಕರಿಸಿದರು. ಬಂಟ್ವಾಳ- ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಕಾಲೇಜು ರಸ್ತೆ ಬಳಿ ಗುಡ್ಡ ಕುಸಿದು ಹಲವು ಮನೆಗಳ ಗೋಡೆಯ ಮೇಲೆ ಬಿದ್ದು ಜನರು ತೊಂದರೆ ಪಡುವಂತಾಯಿತು. ಅಲ್ಲದೆ ಅಡಕೆ, ಬಾಳೆ ಸೇರಿದಂತೆ ಹಲವಾರು ಮರ ಗಿಡಗಳು ಧರೆಗೆ ಉರುಳಿ ಬಿದ್ದಿದೆ. ಪಾಣೆಮಂಗಳೂರು ಹೋಬಳಿಯ ಬೊಂಡಾಲ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ಗೂಡಿನ ಬಳಿಯಲ್ಲಿ ಗುಡ್ಡೆ ಕುಸಿದು ಲತೀಪ್ ಎಂಬವರ ಮನೆಗೆ ಹಾನಿ ಉಂಟಾಗಿದೆ.
ಕೃಷಿ ಭೂಮಿ ಮುಳುಗಡೆ: ಬಿಳಿಯೂರಿನ ಕರ್ವೇಲು ಎಂಬಲ್ಲಿಯೂ ಗುಡ್ಡ ಕುಸಿತದಿಂದ ಮನೆಯೊಂದಕ್ಕೆ ಹಾನಿ ಸಂಭವಿಸಿದೆ.
ಶಂಭೂರಿನ ಪೊರ್ಸಾಪಾಲ್ ಎಂಬಲ್ಲಿ ಗುಡ್ಡವೊಂದು ನೀರು ಹರಿಯುವ ಬೃಹತ್ ತೋಡಿಗೆ ಕುಸಿಗೆ ಬಿದ್ದ ಪರಿಣಾಮ ನೀರಿನ ಹರಿವಿಗೆ ತಡೆ ಉಂಟಾಗಿ ನೀರು ಹರಿಯಲಾಗದೆ, ಆಸುಪಾಸಿನ ಕೃಷಿಭೂಮಿಗಳು ಮುಳುಗಡೆಯಾಗಿದ್ದು, ಅಪಾರಪ್ರಮಾಣದ ನಷ್ಟ ಉಂಟಾಗಿದೆ.
ಮಾರ್ಷಲ್ ಪಿಂಟೋ, ಸಂಜೀವ ಪೂಜಾರಿ, ಸುರೇಶ್ ಪೂಜಾರಿ, ವಿಶ್ವನಾಥ ಪೂಜಾರಿ, ಮುತ್ತಮ್ಮ ಅವರ ಗದ್ದೆಯಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸುದ್ದಿ ತಿಳಿದ ತಾ.ಪಂ. ಸದಸ್ಯ ಆನಂದ ಶಂಭೂರು ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಕಂದಾಯ ಅಧಿಕಾರಿಗಳು ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. ಶನಿವಾರ ಸಂಜೆ ವೇಳೆಗೆ ಖಾಲಿಯಾಗಿದ್ದ ನೇತ್ರಾವತಿ ನದಿ, ರಾತ್ರಿ ಸುರಿದ ಗಾಳಿಮಳೆಗೆ ಭಾನುವಾರ ಮುಂಜಾನೆಯ ವೇಳೆಗೆ ತುಂಬಿ ಹರಿದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.