ಸುಳ್ಯ: ಅಲ್ಲಲ್ಲಿ ಭೂಕುಸಿತ ರಸ್ತೆ ಸಂಚಾರಕ್ಕೆ ಅಡ್ಡಿ
ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು ಜನತೆ ತೀವ್ರ ತೊಂದರೆಗೀಡಾಗಿದ್ದಾರೆ.
ಜಾಲ್ಸೂರು- ಸುಬ್ರಹ್ಮಣ್ಯ ರಸ್ತೆಯಲ್ಲಿರುವ ಕಂದಡ್ಕದಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಈ ರಸ್ತೆಗೆ ಇತ್ತೀಚೆಗಷ್ಟೇ ಕಾಂಕ್ರಿಟೀಕರಣವಾಗಿತ್ತು. ಆದರೆ ಮಳೆ ನೀರು ಹರಿಯಲು ಎರಡೂ ಬದಿಗಳಲ್ಲಿ ಜಾಗವಿಲ್ಲದ್ದರಿಂದ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ.
ಪುತ್ತೂರು- ಪಂಜ ಸಂಪರ್ಕ ರಸ್ತೆ ಮಧ್ಯೆ ಪಂಜ ಸಮೀಪದ ಅಡ್ಡಹೊಳೆ ಎಂಬಲ್ಲಿಯ ಬೊಳ್ಮಲೆ ಸೇತುವೆ ಕೂಡ ಮುಳುಗಡೆಗೊಂಡಿದೆ. ಅತ್ತ ಕುಮಾರಧಾರಾ ಸೇತುವೆ ಜಲಾವೃತಗೊಂಡಾಗ ಜನರು ಪರ್ಯಾಯ ಮಾರ್ಗವಾಗಿ ಇದನ್ನು ಬಳಸುತ್ತಿದ್ದರು. ಈಗ ಇದೂ ಕೂಡ ಬಂದ್ ಆಗಿದ್ದು ಸಂಕಷ್ಟಪಡುವಂತಾಯಿತು.
ಗ್ರಾಮಾಂತರ ಪ್ರದೇಶಗಳಲ್ಲಿ ಹರಿಯುವ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ತೋಟಗಳಿಗೆ ನೀರು ನುಗ್ಗಿ ತೋಟಗಳು ಸಮುದ್ರದಂತೆ ಕಂಡು ಬಂದಿವೆ. ಅಲ್ಲಲ್ಲಿ ಚಿಕ್ಕಪುಟ್ಟ ಸೇತುವೆಗಳು ಮುಳುಗಿ ಸಂಪರ್ಕ ಕಡಿತಗೊಂಡು ಜನಜೀವನ ಅಸ್ಥವ್ಯಸ್ತಗೊಂಡಿದೆ. ಪೇರಡ್ಕದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸೇತುವೆಯ ಬದಿಯಲ್ಲಿ ಭಾರಿ ಮಳೆಯಿಂದ ಕುಸಿತ ಉಂಟಾಗಿದೆ. ಇಲ್ಲಿ ಕಾಮಗಾರಿಗೆಂದು ಬಂದ ಜೆಸಿಬಿ ನೀರಿನಡಿ ಮುಳುಗಿದೆ. ಕಡೆಪಾಲದ ತಾತ್ಕಾಲಿಕ ಸೇತುವೆಯ ಮಧ್ಯೆ ಕೊರೆತ ಸಂಭವಿಸಿದ್ದು, ಬಿಳಿಯಾರಿನಲ್ಲಿ ಭೂಕುಸಿತ ಸಂಭವಿಸಿದೆ. ಸಂಪಾಜೆ- ಸುಳ್ಯ ಮಧ್ಯೆ ರಸ್ತೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಅಲ್ಲಲ್ಲಿ ಹಾನಿ ಸಂಭವಿಸಿದೆ. ಮಳೆ ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿ ಸಂಭವಿಸಿದ್ದು ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ. ಕಳೆದ 24 ಗಂಟೆಗಳ ಕಾಲ ವಿದ್ಯುತ್ ನಾಪತ್ತೆಯಾಗಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಬಂದರೂ ಸರಬರಾಜು ಸರಿಯಾಗಿಲ್ಲ.