ಚಿನ್ನ ಕಳ್ಳ ಸಾಗಣೆಯಲ್ಲಿ ನಿಲ್ದಾಣ ಶೌಚಾಲಯ ಸಿಬ್ಬಂದಿಯೇ ಭಾಗಿ
ಮಂಗಳೂರು: ಬಜಪೆ ವಿಮಾನ ನಿಲ್ದಾಣದ ಟಾಯ್ಲೆಟ್ ತೂತಲ್ಲಿ ಅಡಗಿಸಿಟ್ಟಿದ್ದ 31.64 ಲಕ್ಷ ಮೌಲ್ಯದ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
1 ಕಿಲೋ ತೂಗುವ ಚಿನ್ನ ಉಂಡೆ, 115 ಗ್ರಾಂ ತೂಗುವ ಎರಡು ಚಿನ್ನದ ಸರಳನ್ನು ಶೌಚಾಲಯ ಸಿಬ್ಬಂದಿಯಿಂದ ವಶವಡಿಸಿಕೊಂಡಿದ್ದಾರೆ. ದುಬೈಯಿಂದ ಬರುವ ಪ್ರಯಾಣಿಕ ಚಿನ್ನದ ಉಂಡೆಗಳನ್ನು ತಂದು ತಪಾಸಣೆಗೆ ಮುನ್ನ ನಿರ್ದಿಷ್ಟ ಸ್ಥಳದಲ್ಲಿ ಎಸೆಯುತ್ತಾರೆ. ಇದನ್ನು ಶೌಚಾಲಯ ಸಿಬ್ಬಂದಿ ಟಾಯ್ಲೆಟ್‌ನಲ್ಲಿ ತಂದು ಅಡಗಿಸಿಡುತ್ತಾರೆ. ಬಳಿಕ ಸಮಯ ಸಾಧಿಸಿ ಪಾರ್ಕಿಂಗ್‌ನಲ್ಲಿ ಕಾಯುತ್ತಿರುವ ವ್ಯಕ್ತಿಗೆ ನೀಡುತ್ತಾರೆ.
ಶುಚಿತ್ವ ಸಿಬ್ಬಂದಿ ಕರಂಬಾರು ನಿವಾಸಿ ಗಣೇಶ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಏರ್ ಇಂಡಿಯಾದಲ್ಲಿ ದುಬೈಯಿಂದ ಬಂದಿದ್ದ ಪ್ರಯಾಣಿಕ ಇಟ್ಟು ಹೋಗಿದ್ದ ಚಿನ್ನವನ್ನು ಪಾರ್ಕಿಂಗ್‌ನಲ್ಲಿ ಕಾಯುತ್ತಿದ್ದ ನೌಷಾದ್‌ಗೆ ನೀಡುವುದು ತನ್ನ ಕೆಲಸ ಎಂದು ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ. ಪಾರ್ಕಿಂಗ್ ಬಳಿ ಪರಿಶೀಲಿಸಿದಾಗ ಬಿ.ಸಿ.ರೋಡ್‌ನ ನೌಷಾದ್ ಕಾಯುತ್ತಿದ್ದ. ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರನ್ನು ಬಂದಿಸಿ, ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.