ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿಕ್ಷಕರೇ, ಎಸ್ಸೆಸ್ಸೆಲ್ಸಿ ಮಕ್ಕಳ ದತ್ತು ಪಡೀರಿ!

Rashmi Kasaragodu
Updated On : 17 Jul 2014, 11:55 am

ಮೌನೇಶ ವಿಶ್ವಕರ್ಮ
ಬಂಟ್ವಾಳ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ಪಡೆಯಬೇಕು ಎಂದು ಸ್ವತಃ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಕ್ಕಳನ್ನು ದತು ಪಡೆಯಲು ಪ್ರತ್ಯೇಕ ಕಾನೂನು-ನಿಯಮಾವಳಿಗಳಿರುವಾಗ ಕ್ಷೇತ್ರ ಶಿಕ್ಷಣಾಧಿಕಾರಿ ಯಾಕಾಗಿ ಈ ಆದೇಶ ಹೊರಡಿಸಿದ್ದಾರೆ ಎಂದು ಬೆರಗಾಗಬೇಡಿ. ನಿಧಾನ ಕಲಿಕೆಯ ಮಕ್ಕಳು ಕಲಿಕೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕೆನ್ನುವ ಇರಾದೆಯಿಂದ ಮಕ್ಕಳ ಬಗ್ಗೆ ಶಿಕ್ಷಕರು ಹೆಚ್ಚು ಗಮನನೀಡಲಿ ಎಂಬ ಕಾರಣದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
 ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ನಿಧಾನ ಕಲಿಕಾ ವಿದ್ಯಾರ್ಥಿಗಳ ದತ್ತು ಪ್ರಕ್ರಿಯೆ ಸಹಿತ 24 ಅಂಶಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಏನಿದು ದತ್ತು ಪ್ರಕ್ರಿಯೆ..: ಹತ್ತನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ  ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಗುರುತಿಸಿದ ಮಕ್ಕಳನ್ನು ಆಯಾ ಶಾಲಾ ಶಿಕ್ಷಕರು ದತ್ತು ಪಡೆದುಕೊಳ್ಳಬೇಕು ಹಾಗೂ ದತ್ತು ಪಡೆದ ವಿದ್ಯಾರ್ಥಿ ಬಗ್ಗೆ ಆಯಾ ಶಿಕ್ಷಕರು ವಿಶೇಷ ಆಸ್ಥೆ ವಹಿಸಬೇಕು. ಆ ವಿದ್ಯಾರ್ಥಿಯ ಕಲಿಕಾ ಮಟ್ಟಗಳನ್ನು ಪರಿಶೀಲಿಸುವುದರ ಜೊತೆಯಲ್ಲಿ ಕ್ಲಿಷ್ಟ ವಿಷಯಗಳ ಬಗ್ಗೆ ಪೂರಕ ಅಂಶಗಳನ್ನು  ತಿಳಿಯಪಡಿಸುವುದು. ಆಯಾ ವಿದ್ಯಾರ್ಥಿ ಜೊತೆ ನೇರ ಸಂಪರ್ಕವಿರಿಸಿಕೊಂಡು ಪುಸ್ತಕಗಳ ಪರಿಶೀಲನೆ ಮಾಡುವುದು. ಪೋಷಕರೊಂದಿಗೆ ಚರ್ಚಿಸುವುದು ಇತ್ಯಾದಿ ಸೇರಿಕೊಂಡಿದೆ.
 ಜೊತೆಯಲ್ಲಿ ಭಾಷಾ ಸಾಮರ್ಥ್ಯ ಬೆಳೆಸಲು ಮಿಂಚುಪಟ್ಟಿಗಳ ಬಳಕೆ, ವಾಕ್ಯರಚನೆ, ವ್ಯಾಕರಣಾಂಶಗಳ ಕಲಿಕೆಗೆ ಹಾಗೂ ಅಭಿವ್ಯಕ್ತಿಗೆ ಹೆಚ್ಚು ಅವಕಾಶ ನೀಡುವುದು.
 ವಿಷಯಗಳಿಗೆ ಸಂಬಂಧಿಸಿದಂತೆ ಅಂತರ್ಜಾಲ ಬಳಸಿ ಸಂಬಂಧಿಸಿದ ಪಾಠದ ಪೂರಕ ಅಂಶಗಳನ್ನು ಬಳಸಿ, ಕಂಪ್ಯೂಟರ್ ಆಧಾರಿತ ಕಲಿಕೆ ನಡೆಸಲು ಪ್ರಯತ್ನಿಸುವುದು, ನಿಧಾನ ಕಲಿಕಾ ವಿದ್ಯಾರ್ಥಿಗಳ ಗುಂಪು ರಚಿಸಿ ಕೊನೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸುವುದು.
 ಹೆಚ್ಚು ಹೆಚ್ಚು ಘಟಕ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಂದಲೇ ಸ್ವಮೌಲ್ಯಮಾಪನ ಮಾಡಿಸುವುದು. ಪ್ರತಿ ತಿಂಗಳು ಮುಖ್ಯ ಶಿಕ್ಷಕರ ಸಭೆ ಕರೆದು ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಫಲಿತಾಂಶ ಹೆಚ್ಚಿಸುವಲ್ಲಿ ಚರ್ಚಿಸುವಿಕೆ ಮತ್ತು ಶಾಲೆಗಳಲ್ಲಿ ಅನುಷ್ಠಾನ, 10ನೇ ತರಗತಿಗೆ ಶಾಲಾ ಅವಧಿಗೆ ಒಂದು ಗಂಟೆ ಮುಂಚಿತವಾಗಿ ಒಂದು ಅವಧಿಯನ್ನು ಆರಂಭಿಸುವುದು, ಎಲ್ಲಾ ಶಿಕ್ಷಕರು ಶಾಲಾ ಆರಂಭಕ್ಕೆ ಅರ್ಧಗಂಟೆ ಮುಂಚಿತವಾಗಿ ಶಾಲೆಯಲ್ಲಿ ಹಾಜರಿರುವುದು, ಬೆಳಗ್ಗೆ ಮತ್ತು ಸಂಜೆ ವಿಷಯವಾರು ವಿಶೇಷ ತರಗತಿಗಳನ್ನು ನಡೆಸುವುದು ಮೊದಲಾದ ಸೂಚನೆಗಳನ್ನು ಆದೇಶದಲ್ಲಿ ನೀಡಲಾಗಿದೆ.
 ಶಿಕ್ಷಣಾಧಿಕಾರಿಯವರ ಸೂಚನೆಯಂತೆ ಬಂಟ್ವಾಳ ತಾಲೂಕಿನಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ತಾಲೂಕಿನ ಪ್ರೌಢಶಾಲೆಗಳಲ್ಲಿ ನಿಧಾನಕಲಿಕೆಯ ಮಕ್ಕಳನ್ನು ಶಿಕ್ಷಕರು ದತ್ತು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಶಾಲೆ ಆರಂಭಗೊಂಡು ಇನ್ನೂ 2 ತಿಂಗಳು ಮುಗಿಯುವ ಮುನ್ನವೇ ಕಲಿಕೆ ಆಸಕ್ತಿ ಹೆಚ್ಚಿಸುವ ಶಿಕ್ಷಣ ಇಲಾಖೆಯ ಈ ಹೊಸ ಚಿಂತನೆ ಎಷ್ಟು ಫಲ ನೀಡೀತು ಎನ್ನುವುದೇ ಸದ್ಯದ ಕುತೂಹಲ.


ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಕರ್ಷಿಸುವುದು ಈ ದತ್ತು ಪ್ರಕ್ರಿಯೆ ಮುಖ್ಯ ಉದ್ದೇಶ. ಆ ಮೂಲಕ ಮಕ್ಕಳು ಹಾಗೂ ಮಕ್ಕಳ ಹೆತ್ತವರ ಜೊತೆಯಲ್ಲಿ ಶಿಕ್ಷಕರು ಸಂಪರ್ಕದಲ್ಲಿದ್ದು ಕಲಿಕಾ ವಿಚಾರಗಳನ್ನು ಚರ್ಚಿಸಬಹುದು. ಹಿಂದೆ ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾಗ ಈ ದತ್ತು ಪ್ರಕ್ರಿಯೆ ಅನುಷ್ಠಾನಗೊಳಿಸಿದ್ದೆ. ಇದೀಗ ಬಂಟ್ವಾಳದಲ್ಲಿ ಮುಂದುವರಿಸಲಾಗಿದೆ.
ಟಿ ಶೇಷಶಯನ ಕಾರಿಂಜ
ಕ್ಷೇತ್ರ ಶಿಕ್ಷಣಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement