ಬೆಳಗ್ಗೆ ಕೆಲಸಕ್ಕೆ ಹೋದಾಗ ಇದ್ದ ಜೋಪಡಿ ವಾಪಸ್ ಬಂದಾಗ ನೆಲಸಮ!
ಬಂಟ್ವಾಳ: ಸರ್ಕಾರಿ ಜಮೀನಿನಲ್ಲಿ ಜೋಪಡಿ ನಿರ್ಮಿಸಿದ್ದಾರೆಂದು ಆರೋಪಿಸಿ ಕಂದಾಯ ಇಲಾಖೆ ಅಧಿಕಾರಿಗಳು ಬಡ ದಂಪತಿಯ ಜೋಪಡಿಯನ್ನೇ ಕೆಡವಿ ಹಾಕಿದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಲೊರೆಟ್ಟೋ ಪದವು ಸಮೀಪದ ಮಾದರಿಗುಡ್ಡೆಯ ಕಾಂಜಿಲಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ರಘು ಪೂಜಾರಿ- ಸೌಮ್ಯ ದಂಪತಿಯೇ ಜೋಪಡಿ ಕಳೆದುಕೊಂಡ ನಿರ್ಗತಿಕರು.
ಈ ದಂಪತಿ ಕಳೆದ ಕೆಲವು ಸಮಯದ ಹಿಂದೆ ಕಾಂಜಿಲಕೋಡಿಯ ಸರ್ಕಾರಿ ಜಮೀನಿನಲ್ಲಿ ಜೋಪಡಿ ಕಟ್ಟಿಕೊಂಡು ವಾಸ್ತವ್ಯ ಮಾಡುತ್ತಿದ್ದರು. ಇವರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದಾರೆಂಬ ಆರೋಪದಲ್ಲಿ ಕಂದಾಯ ನಿರೀಕ್ಷಕ ಸಾಧು ಹಾಗೂ ಬಂಟ್ವಾಳ ಗ್ರಾಮಕರಣಿಕರು ಯಾವುದೇ ಮುನ್ಸೂಚನೆ ನೀಡದೆ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ರಘು ಪೂಜಾರಿ ಹಾಗೂ ಸೌಮ್ಯ ದಂಪತಿ ಬಡವರಾಗಿದ್ದು, ಬಂಟ್ವಾಳದ ಶಾಮಿಯಾನದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದಾರೆ. ಈ ದಂಪತಿ ಬುಧವಾರ ಕೆಲಸಕ್ಕೆ ತೆರಳಿದ್ದ ವೇಳೆ ಕಂದಾಯ ಅಧಿಕಾರಿಗಳು ಜೋಪಡಿ ಕೆಡವಿ ಹಾಕಿದ್ದು ಅವರು ಸಂಜೆ ವಾಪಸ್ ಬಂದಾಗಲೇ ವಿಷಯ ಗೊತ್ತಾಗಿದ್ದು. ಕಂದಾಯ ಇಲಾಖಾಧಿಕಾರಿಗಳ ಕ್ರಮದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸ್ಥಳೀಯರಿಂದ ಮರು ನಿರ್ಮಾಣ: ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯ ಯುವಕರ ತಂಡ ತಡರಾತ್ರಿಯೇ ಸದರಿ ಸ್ಥಳದಲ್ಲಿ ಜೋಪಡಿಯನ್ನು ಮರು ನಿರ್ಮಿಸಿದ್ದಾರೆ. ಗುರುವಾರ ಬೆಳಗ್ಗೆ ಮತ್ತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಜೋಪಡಿ ಕೆಡವಲು ಮುಂದಾದಾಗ ಸ್ಥಳೀಯರೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಇರುವ ಹಲವು ಅಕ್ರಮ ಜೋಪಡಿ ತೆರವುಗೊಳಿಸಿ ಬಳಿಕ ಇಲ್ಲಿಗೆ ಬನ್ನಿ ಎಂದು ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.