ಮೂಲ್ಕಿ ಸಿಎಸ್‌ಐ ಆಶ್ರಮ ಹೆಣ್ಣುಮಕ್ಕಳ ದೌರ್ಜನ್ಯ ತನಿಖೆಗೆ ಆಯೋಗ ಆದೇಶ
ಮಂಗಳೂರು: ಮೂಲ್ಕಿ ಸಿಎಸ್‌ಐ ಹೆಣ್ಣುಮಕ್ಕಳ ಬೋರ್ಡಿಂಗ್ ಹೋಮ್‌ನಲ್ಲಿ ಸ್ನಾನಗೃಹ, ಶೌಚಾಲಯ ಅಡುಗೆ ಕೋಣೆ ಅವ್ಯವಸ್ಥೆ ಮತ್ತು ಚರ್ಚ್‌ಗೆ ಮಕ್ಕಳನ್ನು ಬಲವಂತವಾಗಿ ಕಳುಹಿಸುತ್ತಿರುವ ಕುರಿತು ತನಿಖೆ ನಡೆಸುವಂತೆ ಮಾನವ ಹಕ್ಕು ಆಯೋಗ ಆದೇಶಿಸಿದೆ.
ಅನಾಥರಂತೆ ಹೆಣ್ಣು ಮಕ್ಕಳು ಬಯಲಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ. ಅನಾಥಾಲಯದ ಹೆಣ್ಣುಮಕ್ಕಳಿಗೆ ಹಿಂಸೆ ನೀಡುತ್ತಿರುವುದು, ಮೂಲ ಸೌಕರ್ಯ ನೀಡದೆ ಇರುವ ಕುರಿತು ಕೊಡಗು, ಬಾಗಲಕೋಟೆ, ಮೂಲ್ಕಿಯಲ್ಲಿರುವ ಹೆತ್ತವರು, ಗ್ರಾಮಸ್ಥರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ದೂರನ್ನು ಪರಿಗಣಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ 4 ವಾರಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮತ್ತು ಮಕ್ಕಳ ರಕ್ಷಣಾಧಿಕಾರಿಗೆ ಆದೇಶಿಸಿದೆ. ಮಕ್ಕಳ ಬದುಕು, ಸ್ವಾತಂತ್ರ್ಯ, ಗೌರವ ಮತ್ತು ಹಕ್ಕಿನ ಗಂಭೀರ ಪ್ರಕರಣವಾಗಿರುವುದರಿಂದ ಕಾನೂನಿಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕುಗಳ ಆಯೋಗದ ಸಹಾಯಕ ವಿಲೇಖನಾಧಿಕಾರಿ ಅದೇಶಿಸಿದ್ದಾರೆ.
ಅ.15 ರಂದು ಪ್ರತಿಭಟನೆ
ಮಂಗಳೂರು: ಮೂಲ್ಕಿ ಸಿಎಸ್‌ಐ ಬೋರ್ಡಿಂಗ್ ಆಶ್ರಮ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ನೀಡದೆ ಪ್ರತಿ ಭಾನುವಾರ ಸಿಎಸ್‌ಐ ಚರ್ಚ್‌ಗೆ ಕಳುಹಿಸುತ್ತಿರುವದರ ವಿರುದ್ಧ ಅ.15ರಂದು ಪ್ರತಿಭಟನೆ ನಡೆಯಲಿದೆ. ಸಿಎಸ್‌ಐ ಬಿಷಪ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೆತ್ತವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.