ಲಕ್ಷ ವೃಕ್ಷ ಅಭಿಯಾನ, ವನಮಹೋತ್ಸವಕ್ಕೆ ಚಾಲನೆ ಇಂದು
ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್, ಉಜಿರೆ ಎಸ್‌ಡಿಎಂ ಕಾಲೇಜು, ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಉಜಿರೆಯ ಶ್ರೀ.ಧ.ಮಂ. ಕಾಲೇಜಿನ ಔಷಧೀಯ ಸಸ್ಯೋದ್ಯಾನದಲ್ಲಿ ಜು.19ರಂದು ಬೆಳಗ್ಗೆ 10.30ಕ್ಕೆ ಲಕ್ಷ ವೃಕ್ಷ ವ ಅಭಿಯಾನ- ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕಾರ್ಯಕ್ರಮವನ್ನು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾ, ಉಜಿರೆ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಗೌಡ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಎಸ್. ಬಿಜ್ಜೂರ್, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಓ. ಪಾಲಯ್ಯ, ಸಂಪನ್ಮೂಲ ವ್ಯಕ್ತಿಯಾಗಿ ಸಸ್ಯಶಾಸ್ತ್ರಜ್ಞ ವಿಟ್ಲದ ದಿನೇಶ್ ಎಂ.ನಾಯಕ್, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಭಾಗವಹಿಸಲಿದ್ದಾರೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಎ. ಜಯಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಷರ ದಾಸೋಹ ಅಕ್ಕಿಯಲ್ಲಿ ಹುಳ!
ಮೂಲ್ಕಿ: ಕಟೀಲು ದೇವಳದ ವತಿಯಿಂದ ನಡೆಯುವ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆಗೆ ಸರ್ಕಾರದ ಅಕ್ಷರ ದಾಸೋಹ ಯೋಜನೆಯಡಿ ಬಂದಿರುವ ಅಕ್ಕಿಯಲ್ಲಿ ನುಸಿ ಕಂಡು ಬಂದಿದ್ದು, ಗುರುವಾರ ಮಧ್ಯಾಹ್ನ ಮಕ್ಕಳಿಗೆ ಬಡಿಸಿದ ಅನ್ನದಲ್ಲಿ ಕಪ್ಪುಹುಳ (ಗುಗ್ಗುರು) ಕಂಡು ಬಂದು ಮಕ್ಕಳು ಊಟ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಅಕ್ಷರ ದಾಸೋಹ ಯೋಜನೆಯಡಿ ಜುಲೈ ತಿಂಗಳಲ್ಲಿ ಬಂದ 50 ಕೆ.ಜಿ. ಅಕ್ಕಿಯ 90 ಮೂಟೆ ಚೀಲಗಳು ಬಂದಿದ್ದು ಅದರಲ್ಲಿ ಬಹುತೇಕ ಮೂಟೆಯಲ್ಲಿ ಹುಳಗಳು ಕಂಡುಬಂದಿವೆ. ಹಾಗಾಗಿ ಶುಕ್ರವಾರ ದೇವಳದ ವತಿಯಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗಿದೆ. ಅಕ್ಕಿಯಲ್ಲಿ ಹುಳ ಕಂಡು ಬಂದ ಬಗ್ಗೆ ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಹಾಗೂ ದೇವಳದ ಆಡಳಿತ ಮಂಡಳಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.