ಜಿಲ್ಲಾ ಸೆಶನ್ಸ್ ನ್ಯಾಯಾಧೀಶರ ಅಂಗರಕ್ಷಕಗೆ ಕೈದಿಗಳಿಂದ ಹಲ್ಲೆ!
ಮಂಗಳೂರು: ಜಿಲ್ಲಾ ಸೆಶನ್ಸ್ ಕೋರ್ಟ್ನಲ್ಲಿ ನ್ಯಾಯಾಧೀಶರಿಗೆ ಕಾಣುವಂತೆ ಅಸಭ್ಯವಾಗಿ ವರ್ತಿಸುತ್ತಿದ್ದ ಕೈದಿಗಳನ್ನು ಏಳುವಂತೆ ಸೂಚಿಸಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕೈದಿಗಳಾದ ಗುರುಪ್ರಸಾದ್, ಭವಾನಿ ಶಂಕರ ಹಾಗೂ ಇತರ ನಾಲ್ಕು ಮಂದಿ ಜಿಲ್ಲಾ ಸೆಶನ್ಸ್ ಕೋರ್ಟ್ಗೆ ವಿಚಾರಣೆಗೆ ಉಡುಪಿ ಪೊಲೀಸ್ ಬೆಂಗಾವಲಲ್ಲಿ ಹಾಜರಾಗಿದ್ದರು. ನ್ಯಾಯಾಧೀಶರಿಗೆ ಕಾಣುವಂತೆ ಕೋರ್ಟ್ನ ಬಲ ಬದಿಯಲ್ಲಿ ಕುಳಿತಿದ್ದರು. ನ್ಯಾಯಾಧೀಶರ ಸೂಚನೆಯಂತೆ ಸಶಸ್ತ್ರಸ ಮೀಸಲು ಪಡೆಯ ಪೊಲೀಸ್, ನ್ಯಾಯಾಧೀಶರ ಅಂಗರಕ್ಷಕನಾಗಿ ಕೆಲಸ ಮಾಡುವ ರಂಜಿತ್, ವಿಚಾರಣಾಧೀನ ಕೈದಿಗಳ ಬಳಿ ಬಂದು ಅಲ್ಲಿಂದ ಎದ್ದು ಬೇರೆಡೆ ಕುಳಿತುಕೊಳ್ಳುವಂತೆ ಸೂಚಿಸಿದರು. 'ಆಗ ಕೈದಿಗಳು ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ, ನಮ್ಮನ್ನು ತಡೆಯಲು ನೀನು ಯಾರು' ಎಂದು ಗದರಿಸಿದರು. ನ್ಯಾಯಾಧೀಶರ ಸೂಚಿಸಿದ್ದಾರೆ, ಬೇರೆಡೆ ಖಾಲಿ ಇರುವ ಸ್ಥಳದಲ್ಲಿ ಕುಳಿತುಕೊಳ್ಳಿ ಎಂದಾಗ, ಕೈದಿಗಳು ಕೈಯಿಂದ ದೂಡಿ ಕಾಲಿಂದ ಒದ್ದು ಹಲ್ಲೆ ಮಾಡಿದ್ದಾರೆ. ಜೈಲ್ನಿಂದ ಹೊರ ಬಂದ ತಕ್ಷಣ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆಗ ಬೆಂಗಾವಲು ಪೊಲೀಸರು, ಕೋರ್ಟ್ ಆರ್ಡರ್ಲಿಗಳು ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ.