ಲಕ್ಕಿ ಸ್ಕೀಂ ನಡೆಸಿ ವಂಚಿಸಿದ ಸಂಸ್ಥೆ ವಿರುದ್ಧ ದೂರು
ಬೆಳ್ತಂಗಡಿ: ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ತೋರಿಸಿ ಸಾರ್ವಜನಿಕರಿಂದ ಲಕ್ಷಾಂತರ ರುಪಾಯಿ ವಸೂಲು ಮಾಡಿ ಕೊನೆಗೆ ಉಳಿದವರಿಗೆ ಏನು ನೀಡದೇ ಪಂಗನಾಮ ಹಾಕಿದ ಟ್ರಸ್ಟ್ವೊಂದರ ಪಾಲುದಾರರ ವಿರುದ್ಧ ಲಕ್ಕಿ ಸ್ಕೀಂನ ಏಜೆಂಟರು ಶುಕ್ರವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿಯ ಸಂತೆಕಟ್ಟೆ ಸಮೀಪ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ ಲಕ್ಕಿ ಡ್ರಾ ಸ್ಕೀಂ ನಡೆಸುತ್ತಿದ್ದು ವಿವಿಧ ಗೃಹಪಯೋಗಿ, ಐಶಾರಾಮಿ ವಸ್ತುಗಳ ಆಸೆ ಹುಟ್ಟಿಸಿ ಸುಮಾರು 1500ಕ್ಕೂ ಹೆಚ್ಚು ಸದಸ್ಯರನ್ನಾಗಿ ಮಾಡಿಕೊಂಡು ಬಂದಿದೆ. ಇದೀಗ ಹಣ ಕಟ್ಟಿದವರಿಗೆ, ಡ್ರಾದಲ್ಲಿ ವಿಜೇತರಾದ ಮತ್ತು ಉಳಿದ ಸುಮಾರು 700 ಮಂದಿಗೆ ಯಾವುದೇ ವಸ್ತುಗಳನ್ನು ನೀಡದೆ 35 ಲಕ್ಷದಷ್ಟು ಸೊತ್ತುಗಳನ್ನು ನೀಡಲು ಬಾಕಿ ಇದೆ. ಸಂಸ್ಥೆಯು ಬೆಳ್ತಂಗಡಿ ಮಾತ್ರವಲ್ಲದೆ ಸುಳ್ಯ, ಪುತ್ತೂರು, ಮಡಿಕೇರಿ, ಮೂಡುಬಿದರೆ, ಕಾರ್ಕಳದಲ್ಲೂ ಶಾಖೆಗಳನ್ನು ಹೊಂದಿದೆ. ಅಲ್ಲಿಯೂ ಜನರನ್ನು ವಂಚಿಸಿದೆ.