ರೈಲು ಬಂದು, ಬಸ್ ಸಂಚಾರ ಬಂದ್!
ಆತ್ಮಭೂಷಣ್
ಮಂಗಳೂರು: ಕೊಂಕಣ ಮಾರ್ಗದಲ್ಲಿ ಹೆಚ್ಚಿನ ರೈಲು ಸಂಚಾರ ದೆಸೆಯಿಂದ ಮಂಗಳೂರು-ಗೋವಾ ನಡುವಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ.
ಪುತ್ತೂರು ಹಾಗೂ ಮಂಗಳೂರಿನಿಂದ ಸಂಚರಿಸುವ ಪಣಜಿ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಮೈಸೂರಿನಿಂದ ಮಂಗಳೂರು ಮೂಲಕ ಪಣಜಿಗೆ ವೋಲ್ವೋ ಬಸ್ ಪ್ರಯಾಣಿಕರು ಇದ್ದರೆ ಮಾತ್ರ ಸಂಚರಿಸುತ್ತಿದೆ. ಪ್ರಯಾಣಿಕರು ರೈಲು ಆಶ್ರಯಿಸುವುದರಿಂದ ಕೆಎಸ್‌ಆರ್‌ಟಿಸಿ ಆದಾಯಕ್ಕೆ ಖೋತಾ ಆಗಿದೆ.
26 ವರ್ಷ ಸಂಚಾರಕ್ಕೆ ಇತಿಶ್ರೀ: ಪುತ್ತೂರಿನಿಂದ ಪಣಜಿಗೆ ಕೆಎಸ್‌ಆರ್‌ಟಿಸಿ ಬಸ್ ನಿತ್ಯ ಸಂಚಾರ ಕಳೆದ 26 ವರ್ಷದಿಂದ ಇತ್ತು. ಬೆಳಗ್ಗೆ 7 ಗಂಟೆಗೆ ಪುತ್ತೂರಿನಿಂದ ಹೊರಟರೆ, ಸಂಜೆ 6.30ಕ್ಕೆ ಪಣಜಿ ತಲುಪುತ್ತಿತ್ತು.
ಇದೇ ರೀತಿ ಪಣಜಿಯಿಂದ ಪುತ್ತೂರಿಗೆ ಸಂಚಾರ ಇರುತ್ತಿತ್ತು. ಯಶವಂತಪುರ-ಕಾರವಾರ ಸೇರಿದಂತೆ ಹೆಚ್ಚಿನ ರೈಲು ಸಂಚಾರ ಆರಂಭವಾದ್ದೇ ತಡ ಈ ಬಸ್‌ನಲ್ಲಿ ಮಂಗಳೂರು ಪ್ರಯಾಣಿಕರ ಸಂಖ್ಯೆ ಇಳಿಮುಖ ಕಂಡಿತು.
ಕೆಎಸ್‌ಆರ್‌ಟಿಸಿ ಪ್ರಕಾರ, ಪ್ರತಿ ಕಿ.ಮೀ.ಗೆ ಸರಾಸರಿ ರು. 32 ಆದಾಯ ಬರಬೇಕು. ಇಲ್ಲದಿದ್ದರೆ ಕನಿಷ್ಠ ರು. 26 ಆದರೂ ತರಬೇಕು. ಈ ಬಸ್ ಕೊಡುತ್ತಿದ್ದ ಆದಾಯ ಕೇವಲ ರು. 10. ಪುತ್ತೂರಿನಿಂದ ನೇರ ಪ್ರಯಾಣಿಕರೇ ಇರುತ್ತಿರಲಿಲ್ಲ. ಸರಾಸರಿ 900 ಕಿ.ಮೀ.ನಂತೆ ಹೋಗಿಬಂದ ಲೆಕ್ಕಾಚಾರ ಹಾಕಿದರೆ ದಿನಕ್ಕೆ ರು. 9 ಸಾವಿರ, ತಿಂಗಳಿಗೆ ರು. 2.70 ಲಕ್ಷ, ವರ್ಷಕ್ಕೆ ರು. 32.40 ಲಕ್ಷ ನಷ್ಟ ಹೊಂದುತ್ತಿತ್ತು. ಕಳೆದ ಒಂದು ವರ್ಷದಿಂದ ಈ ಮಾರ್ಗ ನಷ್ಟದಲ್ಲೇ ಸಂಚರಿಸುತ್ತಿತ್ತು.
'ಪಣಜಿ ಮಾರ್ಗದಲ್ಲಿ ಆದಾಯ ತರಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ ರೈಲು ಸಂಚಾರದಿಂದ ಬಸ್‌ನಲ್ಲಿ ಜನರು ಬರುತ್ತಿಲ್ಲ.
ಆದ್ದರಿಂದ ಅನಿವಾರ್ಯವಾಗಿ ಜು.17ರಿಂದ ಪಣಜಿ ಸಂಚಾರ ಸ್ಥಗಿತಗೊಳಿಸಿದ್ದೇವೆ. ನಷ್ಟದಲ್ಲಿರುವ ದೂರ ಮಾರ್ಗದಲ್ಲಿ ಇನ್ನು ಮುಂದೆ ಸಂಚಾರ ಕೈಗೊಳ್ಳುವುದಿಲ್ಲ' ಎನ್ನುತ್ತಾರೆ ಪುತ್ತೂರು ಘಟಕ ವ್ಯವಸ್ಥಾಪಕ ಜೈಶಾಂತ್.
ರಾಜಹಂಸವೂ ಸ್ಥಗಿತ: ಮಂಗಳೂರಿನಿಂದ ಪ್ರತಿ ರಾತ್ರಿ 9.30ಕ್ಕೆ ಪಣಜಿಗೆ ರಾಜಹಂಸ ಸಾರಿಗೆ ಸಂಚರಿಸುತ್ತಿತ್ತು. ಕಳೆದ ಒಂದೂವರೆ ವರ್ಷದಿಂದ ಇದನ್ನು ಕೂಡ ನಿಲ್ಲಿಸಲಾಗಿದೆ. ಪಣಜಿ ಬಸ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಮಂದಿ ಸಂಚರಿಸುತ್ತಿದ್ದರು. ಆದರೆ ಕಾರವಾರಕ್ಕೆ ಹಗಲು ಮತ್ತು ರಾತ್ರಿ ರೈಲು ಸಂಚಾರ ಶುರುವಾದ ಬಳಿಕ ಜನತೆ ರೈಲು ಆಶ್ರಯಿಸಿದ್ದಾರೆ.
'ಮಂಗಳೂರಿನಿಂದ ಪಣಜಿಗೆ 400 ಕಿ.ಮೀ. ದೂರವಿದ್ದು, ಪ್ರಯಾಣಕ್ಕೆ 10 ಗಂಟೆ ಬೇಕು. ಟಿಕೆಟ್ ದರವೂ ದುಬಾರಿ. ಎಕ್ಸ್‌ಪ್ರೆಸ್‌ನಲ್ಲಿ ರು. 210, ಸುವಿಹಾರಿ ಬಸ್‌ಗಳಿಗೆ ರು. 300ಕ್ಕೂ ಅಧಿಕ. ಆದರೆ ರೈಲಿನಲ್ಲಿ ರು. 60 ದರದಲ್ಲಿ ಹೋಗಬಹುದು. ರಸ್ತೆ ದುರವಸ್ಥೆ, ಸುತ್ತುಬಳಸಿ ಸಂಚಾರ ತಪ್ಪಿಸಿ ಬೇಗ ಪ್ರಯಾಣಿಸಲು ಪ್ರಯಾಣಿಕರು ರೈಲಿನ ಮೊರೆ ಹೋಗುತ್ತಿದ್ದಾರೆ. ಇದರಿಂದ ಬಸ್‌ಗಳಲ್ಲಿ ಸಂಚರಿಸುವವರಿಲ್ಲ. ನಷ್ಟದ ಕಾರಣಕ್ಕೆ ಈ ಟ್ರಿಪ್ ಸ್ಥಗಿತಗೊಳಿಸಲಾಗಿದೆ' ಎನ್ನುತ್ತಾರೆ ಘಟಕ ವ್ಯವಸ್ಥಾಪಕ ಮುರಲೀಧರ್.
ವೋಲ್ವೋ ಬಂದರೆ ಬಂತು: ಮೈಸೂರಿನಿಂದ ಪಣಜಿಗೆ ವೋಲ್ವೋ ನಿತ್ಯ ಸಂಚಾರ ವೇಳಾಪಟ್ಟಿಯಲ್ಲಿ ಮಾತ್ರ. ರಾತ್ರಿ 10.30ಕ್ಕೆ ಮಂಗಳೂರಿನಿಂದ ಬಿಡಬೇಕು. ಕಳೆದ 6 ತಿಂಗಳಿಂದ ವೋಲ್ವೋ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದೆ. ಹಾಗಾಗಿ ಪ್ರಯಾಣಿಕರಿದ್ದರೆ ಮಾತ್ರ ಪಣಜಿಗೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತದೆ. ಇಲ್ಲದಿದ್ದರೆ ಅದೂ ಇಲ್ಲ, ಮಂಗಳೂರಿಗೆ ಟ್ರಿಪ್ ಸೀಮಿತ ಮಾಡುತ್ತಾರೆ ಎನ್ನುತ್ತಾರೆ ಮಂಗಳೂರು ನಿಲ್ದಾಣದ ಅಧಿಕಾರಿಗಳು.