ಅಪಹೃತ ಲಕ್ನೋ ಯುವತಿ ಮರಳಿ ತವರಿಗೆ
ಉಪ್ಪಿನಂಗಡಿ: ಅಪಹರಣಕ್ಕೊಳಗಾದ ಉತ್ತರ ಪ್ರದೇಶದ ಅಪ್ರಾಪ್ತ ವಯಸ್ಕ ಯುವತಿಯನ್ನು ನ್ಯಾಯಾಲಯ ಆದೇಶದನ್ವಯ ಉಪ್ಪಿನಂಗಡಿ ಪೊಲೀಸರ ವಶದಿಂದ ಉತ್ತರ ಪ್ರದೇಶ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಲಕ್ನೋ ಹಮೀನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲ್ಕಿ ರಾಮ್ ಎಂಬವರ ಪುತ್ರಿ ಮಿನ್ನಿ (17) ಎಂಬಾಕೆಯನ್ನು ಜೂ.27ರಂದು ಅಪಹರಿಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಅಲ್ಲಿನ ಪೊಲೀಸರು, ಉಪ್ಪಿನಂಗಡಿ ಸಮೀಪದ ಕುಂತೂರಿನಲ್ಲಿ ಯುವತಿಯನ್ನು ಸಾಜಿದ್ ಎಂಬಾತನ ಜೊತೆ ಪತ್ತೆ ಹಚ್ಚಿದ್ದು, ಉಪ್ಪಿನಂಗಡಿ ಪೊಲೀಸರ ನೆರವಿನಿಂದ ವಶಕ್ಕೆ ತೆಗೆದುಕೊಂಡಿದ್ದರು.
ಸಾಜಿದ್ ಕೂಡ ಉತ್ತರಪ್ರದೇಶ ನಿವಾಸಿ. ಈಗಾಗಲೇ ವಿವಾಹಿತನಾಗಿದ್ದ ಆತ ಪ್ರೀತಿಯ ನೆಪದಲ್ಲಿ ಯುವತಿಯನ್ನು ಅಲ್ಲಿಂದ ಕರೆದುಕೊಂಡು ಬಂದು ಕುಂತೂರಿನ ತನ್ನ ಸ್ನೇಹಿತನ ಮನೆಯಲ್ಲಿರಿಸಿದ್ದ.
ಆರೋಪಿ ಸಾಜಿದ್ ಜತೆ ಯುವತಿಯನ್ನು ಬುಧವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಯುವತಿ ಹಾಗೂ ಸಾಜಿದ್ನನ್ನು ಉತ್ತರ ಪ್ರದೇಶದ ಪೊಲೀಸರಿಗೆ ಒಪ್ಪಿಸಲು ನಿರ್ದೇಶನ ನೀಡಿದೆ. ಹಮೀನಾಬಾದ್ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಸುಭಾಸ್ಸಿಂಗ್ ಆರೋಪಿ ಜತೆ ಮಿನ್ನಿಯನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.