ರಸ್ತೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ: ಎತ್ತಲು ಬರಲೇ ಇಲ್ಲ 108!
ಮಂಗಳೂರು: ನಗರದ ರಥಬೀದಿಯಲ್ಲಿ ಸಂಜೆ ವೇಳೆಗೆ ಭಿಕ್ಷುಕನೊಬ್ಬ ರಸ್ತೆಯಲ್ಲಿ ಬಿದ್ದು ನಿತ್ರಾಣನಾಗಿ ಗುಟುಕು ಜೀವ ಎಳೆಯುತ್ತಿದ್ದನ್ನು ನೋಡಿ ಜನ 108ಕ್ಕೆ ಕರೆ ಮಾಡಿದರೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ.
ಒಂದುವರೆ ಗಂಟೆಗಳ ಕಾಲ ಆ ಜೀವ ಹೊಯ್ದಾಡುತ್ತಿದ್ದರೆ ಮನ ಕರಗಲೇ ಇಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಪೊಲೀಸ್ ಸಂಜೀವಿನಿ ವಾಹನ ಸ್ಥಳಕ್ಕೆ ಬಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದೆ. ಆರೋಗ್ಯ ಇಲಾಖೆಯ 108 ಸುರಕ್ಷೆಗೆ ಅನಾರೋಗ್ಯ ಬಡಿದಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ. 108 ಕರೆ ಮಾಡಿದಾಗ ಬೆಂಗಳೂರಿನಲ್ಲಿ ಕರೆ ಸ್ವೀಕರಿಸಿ, ವೆನ್ಲಾಕ್ನಲ್ಲಿದ್ದ ಸುರಕ್ಷಾ ವಾಹನ ಲೇಡಿಗೋಷನ್ ಆಸ್ಪತ್ರೆಗೆ ಹೋಗಿದೆ ಎಂದು ಮಾಹಿತಿ ನೀಡಿದರು.
ಒಂದುವರೆ ಗಂಟೆ ಬಳಿಕವೂ ಬರಲಿಲ್ಲ. ಕೊನೆಗೆ ಸ್ಥಳೀಯರ ಮನವಿಯಂತೆ ಪೊಲೀಸ್ ಇಲಾಖೆಯ ತುರ್ತು ಅಗತ್ಯಕ್ಕೆ ಇರುವ ಸಂಜೀವಿನಿಯನ್ನು ಅಮಾಯಕನ ಜೀವ ರಕ್ಷಣೆಗೆ ನೀಡಿ ಪೊಲೀಸರು ಮಾನವೀಯತೆ ಮೆರೆದರು.