ರಾಜ್ಯದಲ್ಲಿ ಇನ್ನು ಬಾಡಿಗೆ ಕೃಷಿ ಯಂತ್ರ ಜಮಾನ
ಮಂಗಳೂರು: ಕೂಲಿಗಳಿಲ್ಲದೆ ಕಷ್ಟಪಡುತ್ತಿರುವ ಕೃಷಿಕರಿಗೆ ಇದು ಸಂತಸದ ಸುದ್ದಿ. ಹೋಬಳಿ ಮಟ್ಟದಲ್ಲಿ ಕೃಷಿ ಯಂತ್ರೋಪಕರಣ ಇನ್ನು ಬಾಡಿಗೆಗೆ ಸಿಗಲಿದೆ. ಸರ್ಕಾರವೇ ಬಾಡಿಗೆ ನಿಗದಿಗೊಳಿಸಿ ಖಾಸಗಿ ಸಂಸ್ಥೆಗಳ ಮೂಲಕ ಸೇವಾ ಕೇಂದ್ರ ತೆರೆಯುತ್ತಿದೆ. ರಾಜ್ಯದಲ್ಲಿ ಆಗಸ್ಟ್ 15ರೊಳಗೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಎಸ್ಕೆಡಿಆರ್ಡಿಪಿ) ಮತ್ತು ದೆಹಲಿಯ ಇಂಡಿಯನ್ ಸೊಸೈಟಿ ಆಫ್ ಎಗ್ರಿಬಿಸಿನೆಸ್ ಪ್ರೊಫೆಶನಲ್ಸ್ ಸಂಸ್ಥೆಗಳು ಇದನ್ನು ಅನುಷ್ಠಾನ ಗೊಳಿಸುತ್ತಿದೆ.
ಎಸ್ಕೆಡಿಆರ್ಡಿಪಿಗೆ 161 ಮತ್ತು ಪ್ರೊಫೆಶನಲ್ಸ್ ಸಂಸ್ಥೆಗೆ 17 ಸೇರಿ ಒಟ್ಟು 178 ಸೇವಾ ಕೇಂದ್ರಗಳನ್ನು ಗುರುತಿಸಲಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಇರಲಿದ್ದು, ಕೃಷಿಕರು ಸೇವಾ ಕೇಂದ್ರಕ್ಕೆ ತೆರಳಿ ನಿಗದಿತ ಬಾಡಿಗೆ ಮೊತ್ತ ತೆತ್ತು ಯಂತ್ರೋಪಕರಣ ಪಡೆದು ಕೃಷಿ ನಡೆಸಬಹುದು.
ಪ್ರತಿ ಕೇಂದ್ರಕ್ಕೆ 75: 25 ಅನುಪಾತದಲ್ಲಿ ಅಂದರೆ ಸರ್ಕಾರ ರು. 37.50 ಲಕ್ಷ ಹಾಗೂ ಸಂಸ್ಥೆ ರು. 12.50 ಲಕ್ಷ ಸೇರಿ ಒಟ್ಟು ರು. 50 ಲಕ್ಷವನ್ನು ಯಂತ್ರೋಪಕರಣ ಖರೀದಿಗೆ ನೀಡಲಿದೆ. ಮುಂದಿನ ವರ್ಷ ಪ್ರತಿ ಕೇಂದ್ರಕ್ಕೆ 50: 50 ಅನುಪಾತದಲ್ಲಿ ಅನುದಾನ ನೀಡಲಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದ್ದು, ಆಯಾ ಜಿಲ್ಲೆಯ ಕೃಷಿಗೆ ಬೇಕಾದ ಯಂತ್ರೋಪಕರಣ ಖರೀದಿಸಿ ಬಾಡಿಗೆ ನಿಗದಿಪಡಿಸುತ್ತದೆ.
ಯಾವುದೆಲ್ಲ ಯಂತ್ರೋಪಕರಣ?: ಕೃಷಿಗೆ ಬಳಕೆಯಾಗುವ ಎಲ್ಲ ಯಂತ್ರೋಪಕರಣ ಬಾಡಿಗೆಗೆ ಸಿಗಲಿದೆ. ಟ್ರಾಕ್ಟರ್, ಕಲ್ಟಿವೇಟರ್, ರೊಟೋವೇಟರ್, ಹಲಿಗೆ, ಪವರ್ ಟಿಲ್ಲರ್, ಭತ್ತ ಕಟಾವು, ಕೊನೋವೀಡರ್, ಸ್ಪ್ರೇಯರ್, ನಾಟಿ ಯಂತ್ರ, ಡೀಸೆಲ್ ಪಂಪ್, ಮರ ಏರುವ ಯಂತ್ರ, ಸ್ಪಿಂಕ್ಲರ್ ಮುಂತಾದ ಯಂತ್ರ ಬಾಡಿಗೆಗೆ ಇರುತ್ತದೆ. ಆಯಾ ಪ್ರದೇಶಕ್ಕೆ ಅಗತ್ಯವಿರುವ ಯಂತ್ರವನ್ನು ಬಾಡಿಗೆಗೆ ನೀಡಲಾಗುತ್ತದೆ. ಯಂತ್ರಕ್ಕೆ ಕನಿಷ್ಠ ರು. 30ರಿಂದ 700ರ ವರೆಗೆ ತರಹೇವಾರಿ ಬಾಡಿಗೆ ನಿಗದಿಪಡಿಸಲಾಗಿದೆ. ಹವಾಮಾನ ಆಧಾರಿತ ಯಾಂತ್ರಿಕ ಕೃಷಿಗೆ ಅನುಕೂಲವಾಗಲು ಸಣ್ಣ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಬಾಡಿಗೆಗೆ ಲಭ್ಯವಾಗಲಿದೆ.
ಆಯ್ದ ಹೋಬಳಿಯಲ್ಲಿ ಗ್ಯಾರೇಜ್ ಮಾದರಿಯ ಶೆಡ್ ನಿರ್ಮಿಸುತ್ತಾರೆ. ಅದರಲ್ಲಿ ಹೋಬಳಿಗೆ ಬೇಕಾದ ಕೃಷಿ ಯಂತ್ರ ಇರುತ್ತದೆ. ರೈತರು ಬಂದು ಗಂಟೆವಾರು ಬಾಡಿಗೆ ಪಾವತಿಸಿ ಯಂತ್ರ ಉಪಯೋಗಿಸಿ ಕೃಷಿ ಚಟುವಟಿಕೆ ನಡೆಸಬಹುದು. ಈ ಕೇಂದ್ರದಲ್ಲಿ ಸೂಪರ್ವೈಸರ್, ಸಿಬ್ಬಂದಿ ಹಾಗೂ ಚಾಲಕ ಹೀಗೆ 3 ಮಂದಿ ಇರುತ್ತಾರೆ. ಯಂತ್ರ ಕೆಟ್ಟುಹೋದರೆ ಕಂಪನಿ ದುರಸ್ತಿ ಮಾಡಬೇಕು.
'ದ.ಕ.ಜಿಲ್ಲೆಯಲ್ಲಿ ಬೆಳ್ತಂಗಡಿಯ ಕೊಕ್ಕಡ, ಬಂಟ್ವಾಳದ ಪಾಣೆಮಂಗಳೂರು, ಮಂಗಳೂರಿನ ಗುರುಪುರ, ಪುತ್ತೂರಿನ ಕಡಬ ಹಾಗೂ ಸುಳ್ಯದ ಪಂಜದಲ್ಲಿ ಸೇವಾ ಕೇಂದ್ರ ತೆರೆಯಲಾಗುವುದು. ಕಟ್ಟಡ ಲಭ್ಯ ಇರುವಲ್ಲಿ ಸುಲಭದಲ್ಲಿ ಕೇಂದ್ರ ತೆರೆಯುತ್ತೇವೆ. ಇಲ್ಲವಾದಲ್ಲಿ ಹೊಸದಾಗಿ ನಿರ್ಮಿಸಬೇಕಾಗುತ್ತದೆ. ಆಗಸ್ಟ್ 15ರ ವೇಳೆಗೆ ಯಂತ್ರೋಪಕರಣ ಬಾಡಿಗೆಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ'.
ಟಿ ರಾಘವ, ಎಸ್ಕೆಡಿಆರ್ಡಿಪಿ ಮಂಗಳೂರು ಯೋಜನಾ ನಿರ್ದೇಶಕ