ಡಾ.ಕೆ. ಗೋಪಾಲಕೃಷ್ಣ ಭಟ್ ಕೃತಿ ಬಿಡುಗಡೆ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದು, ನಿವೃತ್ತರಾಗಿರುವ ಡಾ.ಕೆ. ಗೋಪಾಲಕಷ್ಣ ಭಟ್ ಅವರು ಬರೆದ 'ಫ್ಲೋರಾ ಆಫ್ ಸೌತ್ ಕೆನರಾ' ಕೃತಿಯನ್ನು ಬುಧವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಬಿಡುಗಡೆಗೊಳಿಸಲಾಯಿತು. ಮಂಗಳೂರು ಕೊಡಿಯಾಲ್‌ಬೈಲಿನ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಲೀಲಾ ಉಪಾಧ್ಯಾಯ ಅವರು ಈ ಕೃತಿಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಸಸ್ಯಶಾಸ್ತ್ರ ವಿದ್ಯಾರ್ಥಿಗಳು ಪ್ರಕೃತಿಗೆ ಹತ್ತಿರವಾಗಬೇಕು. ಮೊದಲು ವಿದ್ಯಾರ್ಥಿಗಳು ಪ್ರಯೋಗಾಲಯಕ್ಕೆ ಬರುವಾಗ ತಾವೇ ಗಿಡಗಳನ್ನು ತರುತ್ತಿದ್ದರು. ಅಂತಹವರನ್ನು ಪ್ರೋತ್ಸಾಹಿಸುವ ಪ್ರಾಧ್ಯಾಪಕರು ಬೇಕಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪ್ರಕೃತಿಯಲ್ಲಿ ನಮಗೆ ಬೇಕಾದ ಎಲ್ಲವೂ ಇದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವನ್ನು ಹಾಳು ಮಾಡಿ, ನಾವು ಬೆಳೆಯುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ. ವಾಸ್ತವದಲ್ಲಿ ನಾವು ಬೆಳೆಯುತ್ತಿಲ್ಲ. ಬದಲಾಗಿ ಅವಸಾನದ ಅಂಚಿಗೆ ತೆರಳುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಲೇಖಕ ಡಾ. ಗೋಪಾಲಕೃಷ್ಣ ಭಟ್ ಮಾತನಾಡಿ, ಕಳೆದ 30 ವರ್ಷಗಳಿಂದ ಅಧ್ಯಯನ ನಡೆಸಿ, ಸಂಶೋಧನೆ ಮಾಡಿ, ಮಾಹಿತಿ ಕಲೆ ಹಾಕಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಗುರುತಿಸಿದ 1,888 ಸಸ್ಯ ಪ್ರಬೇಧಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಕೆಲವು ಪ್ರಬೇಧಗಳು ಸಿಗದೇ ಇರುವುದರಿಂದ ಇದರಲ್ಲಿ ಸೇರಿಸಲಾಗಿಲ್ಲ. ಒಟ್ಟು 300 ಛಾಯಾಚಿತ್ರಗಳನ್ನೂ ಈ ಪ್ರಸ್ತಕದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಸದಾಶಿವ ರಾವ್ ವಹಿಸಿದ್ದರು. ಡಾ. ವಿಜಯಲಕ್ಷ್ಮೀ ಸಿ. ಭಟ್ ಸ್ವಾಗತಿಸಿದರು.
ಕರಾವಳಿಯಲ್ಲಿ ಭಾರಿ ಮಳೆ ಸಂಭವ
ಉಡುಪಿ: ಕರಾವಳಿ ತೀರದ ಪ್ರದೇಶ ಹಾಗೂ ಒಳನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ಬೀಳುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಜನರು, ಮೀನುಗಾರರು ಎಚ್ಚರಿಕೆಯಿಂದಿರಬೇಕು. ವಿಕೋಪವನ್ನು ತಡೆಯುವುದಕ್ಕೆ ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಕಿನ್ನಿಗೋಳಿ: ತಾಳಮದ್ದಲೆ ಸಪ್ತಾಹ 27ರಿಂದ
ಮೂಲ್ಕಿ: ಕಿನ್ನಿಗೋಳಿ ಯಕ್ಷಲಹರಿ ಸಂಸ್ಥೆಯ 24ನೇ ವಾರ್ಷಿಕೋತ್ಸವ ಅಂಗವಾಗಿ ಯುಗಪುರುಷ ಸಹಯೋಗದಲ್ಲಿ ಜು.27ರಿಂದ ಆ.2ರವರೆಗೆ ಪ್ರತಿದಿನ ಸಂಜೆ 5ರಿಂದ 8ರವರೆಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ 'ವಾಚಮರ್ಥೋನುಧಾವತಿ' ತಾಳಮದ್ದಳೆ ಸಪ್ತಾಹ ನಡೆಯಲಿದೆ. ಜು.27ರಂದು ಸಂಜೆ ತಾಳಮದ್ದಳೆ ಸಪ್ತಾಹದ ಉದ್ಘಾಟನೆ, ಆ.2ರಂದು ಸಂಜೆ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಿನ್ನಿಗೋಳಿ ಯಕ್ಷಲಹರಿ ಸಂಸ್ಥೆ ಅದ್ಯಕ್ಷ ಇ. ಶ್ರೀನಿವಾಸ್ ಭಟ್ ಮತ್ತು ಯುಗಪುರುಷದ ಕೆ. ಭುವನಾಭಿರಾಮ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.