ಹಳಿ ಮೇಲೆ ಬಿದ್ದ ಮರ: ತಪ್ಪಿದ ಅನಾಹುತ
ಮೂಲ್ಕಿ: ಇಲ್ಲಿಗೆ ಸಮೀಪದ ಕಿಲ್ಪಾಡಿ ಬಳಿ ಕೊಂಕಣ ರೈಲ್ವೆ ಹಳಿ ಮೇಲೆ ಗುರುವಾರ ಬೆಳಗ್ಗೆ ದೊಡ್ಡ ಮರವೊಂದು ಬಿದ್ದಿದ್ದು, ರೈಲು ಚಾಲಕನ ಮುಂಜಾಗರೂಕತೆಯಿಂದ ದುರಂತವೊಂದು ತಪ್ಪಿದೆ.
ಬೆಳಗ್ಗೆ ಸುಮಾರು 9 ಗಂಟೆ ಹೊತ್ತಿಗೆ ಮಂಗಳೂರಿನಿಂದ ಮಡಗಾಂವ್‌ಗೆ ಹೋಗುತ್ತಿದ್ದ ರೈಲು ಮೂಲ್ಕಿ ನಿಲ್ದಾಣದಲ್ಲಿ ಕೆಲ ಕಾಲ ನಿಂತು ನಿಧಾನವಾಗಿ ಚಲಿಸುತ್ತಿತ್ತು. ಸುಮಾರು 2 ಕಿ.ಮೀ. ದೂರ ಸಾಗುವಾಗ ಕಿಲ್ಪಾಡಿ ಎಂಬಲ್ಲಿ ಹಳಿ ಮೇಲೆ ಮರ ಬಿದ್ದಿರುವುದನ್ನು ಕಂಡು ಚಾಲಕ ರೈಲು ನಿಲ್ಲಿಸಿದ್ದರಿಂದ ಅಪಾಯ ಸಂಭವಿಸುವುದು ತಪ್ಪಿತು. ರೈಲಿನಲ್ಲಿ ಸುಮಾರು 300ರಷ್ಟು ಮಂದಿ ಇದ್ದರು ಎಂದು ತಿಳಿದುಬಂದಿದೆ.
ಬಳಿಕ ಸ್ಥಳೀಯರು ಆಗಮಿಸಿ ಮರ ಕಡಿದು ರೈಲ್ವೆ ಹಳಿಯನ್ನು ಸಂಚಾರ ಮುಕ್ತಗೊಳಿಸಿದರು. ಸುಮಾರು ಅರ್ಧ ಗಂಟೆ ಬಳಿಕ ರೈಲು ಹೊರಟಿತು. ಈ ಅವಘಡದಿಂದಾಗಿ ಕೊಲಕಾಡಿ ಸೇರಿದಂತೆ ಉಡುಪಿ ಕಡೆಗೆ ಹೋಗುವ ರೈಲ್ವೆ ಹಳಿಯ ಮೇಲೆ ಅಲ್ಲಲ್ಲಿ ಗೇಟುಗಳನ್ನು ಸುಮಾರು 1 ಗಂಟೆವರೆಗೆ ಹಾಕಲಾಗಿದ್ದು, ಸ್ಥಳೀಯ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿತ್ತು.